
ಮುದ್ದೇಬಿಹಾಳ, ಫೆ.18- ಇಲ್ಲಿನ ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಗಣೇಶ ಲಮಾಣಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಪೆÇೀತದಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಬೇಜವಾಬ್ದಾರಿ ಆರೋಪದ ಮೇಲೆ ಪ್ರಾಂಶುಪಾಲ ಎಂ.ವಿ.ವಸ್ತ್ರದ ಮತ್ತು ವಾರ್ಡನ್ ಆಗಿದ್ದ ಜೈನಾಪುರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಪಾಲಕರು ಹಾಗೂ ಸ್ಥಳೀಯರನ್ನು ಸಮಾಧಾನಪಡಿಸಿ ಎರಡು ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಹಸೀಲ್ದಾರ್ ಎಂ.ಎಸ್.ಭಾಗವಾನ ತನಿಖೆಗೆ ಆದೇಶಿಸಿದ್ದು, ಪಪಂ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ಗುರುವಾರ ವಸತಿ ಶಾಲೆಯಲ್ಲಿ 8ನೇ ತರಗತಿಯ ಗಣೇಶ ಲಮಾಣಿ ಬೆಳಗ್ಗೆ 9 ಗಂಟೆಗೆ ಹೊರಹೋಗಿದ್ದ. ಆತ ನೈಸರ್ಗಿಕ ಕ್ರಿಯೆಗೆ ಹೋಗಿರಬಹುದೆಂದು ಎಲ್ಲರು ತಿಳಿದಿದ್ದರು. ಆದರೆ ಪಕ್ಕದಲ್ಲಿರುವ ಹೊಂಡಕ್ಕೆ ಆತ ಬಿದ್ದಿದ್ದಾನೆ. ಸಂಜೆಯಾದರೂ ಯಾರಿಗೂ ಇದು ತಿಳಿದಿರಲಿಲ್ಲ. ನಂತರ ಕೆಲವರು ಆತ ಹೊಂಡದ ಕಡೆ ಹೋಗುತ್ತಿದ್ದ ಬಗ್ಗೆ ಮಾಹಿತಿ ನೀಡಿದಾಗ ನಿನ್ನೆ ಸಂಜೆವರೆಗೂ ಹುಡುಕಾಟ ನಡೆಸಿ ಶವವನ್ನು ಮೇಲೆತ್ತಲಾಗಿದೆ.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)