ಬೆಂಗಳೂರು:ಫೆ-18: ನಟ ಜಗ್ಗೇಶ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರೈ, ಅವರು ಪ್ರತಿಕ್ರಿಯೆ ನೀಡಿದ್ದು, ಗೆದ್ದು ತೊಡೆ ತಟ್ಟಲು ಇದು ರಾಜಕೀಯ ಕಬಡ್ಡಿ ಆಟವಲ್ಲ…ತಾವು ಕಲಾವಿದರು ದಯವಿಟ್ಟು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಟ ಪ್ರಕಾಶ್ ರಾಜ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ಜಗ್ಗೇಶ್ ಅವರು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ನರೇಂದ್ರ ಮೋದಿಯವರಿಗೆ ದೇಶ ಆಳುವ ಅರ್ಹತೆ ಇಲ್ಲ ಎಂಬ ರೈ ಅವರ ಹೇಳಿಕೆಯನ್ನು ಪ್ರಕಟಿಸಿ ಮೂರು ಟ್ವೀಟ್ ಪ್ರಕಟಿಸಿದ್ದರು.
ಇದಕ್ಕೆ ಟ್ವೀಟರ್ ನಲ್ಲಿಯೆಯೇ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು ಗೆದ್ದು ತೊಡೆ ತಟ್ಟಲು ಇದು ರಾಜಕೀಯ ಕಬಡ್ಡಿ ಆಟವಲ್ಲ…ತಾವು ಕಲಾವಿದರು ದಯವಿಟ್ಟು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ತಾಯಂದಿರು…ಅಕ್ಕ ತಂಗಿಯರು, ಬಹಳಷ್ಟು ಹೆಣ್ಣು ಮಕ್ಕಳು ತಮ್ಮನ್ನ ಅಭಿಮಾನದಿಂದ ಬೆಳೆಸಿದ್ದಾರೆ…ಗಮನಿಸುತ್ತಿದ್ದಾರೆ. ತೊಡೆ ತಟ್ಟುವುದು ಗಂಡಸುತನ ಎನ್ನುವ ನಿಮ್ಮ ಮನಸು…ಮಾತು ಸರಿಯಲ್ಲ, ಅಸಭ್ಯವಾಗಿದೆ. ಒಬ್ಬರ ಗಂಡಸುತನ ತೊಡೆ ತಟ್ಟುವುದರಿಂದ ರುಜುವಾತಾಗುವುದಿಲ್ಲ ನಿಮಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ.
ಸಂವಿಧಾನವನ್ನು ಬದಲಿಸುತ್ತೇನೆ ಎನ್ನುವ ನಿಮ್ಮ ಪಕ್ಷದ ಸಂಸದರನ್ನ, ಒಂದು ಕೋಮಿನವರನ್ನ ಈ ಭೂಮಿಯಿಂದಲೇ ಅಳಿಸಬೇಕು ಎಂದು ವಿಷ ಕಾರುವ ನಿಮ್ಮ ಪಕ್ಷದ ಸಂಸದರನ್ನ, ಅಸಭ್ಯ ಮಾತನಾಡುವ ನಿಮ್ಮ ಪಕ್ಷದ ಸದಸ್ಯರನ್ನ, ಜಾತ್ಯಾತೀತರ ತಂದೆ ತಾಯಿಯರನ್ನು ಅಸಭ್ಯವಾಗಿ ಜರಿಯುವ ನಿಮ್ಮ ಪಕ್ಷದ ಸಂದರನ್ನ.. ಇಂತಹ ನಾಯಕರನ್ನ ಕಾಪಾಡುವ ನಿಮ್ಮ ಪಕ್ಷವನ್ನು, ಅದರ ನಾಯಕರನ್ನು ಪ್ರಶ್ನಿಸಲು ನೀವು ಹೇಳುವ ಯಾವ ಅರ್ಹತೆಗಳೂ ಬೇಕಾಗಿಲ್ಲ.. ಮನುಷ್ಯರನ್ನ ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
Prakash Rai,Jaggesh,Twitter