ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಆದಾಯ ತೆರಿಗೆ ವಿಚಾರಣೆಗೆ ಹಾಜರಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದರು

ಬೆಂಗಳೂರು, ಫೆ.18- ಇತ್ತೀಚೆಗೆ ಆದಾಯ ತೆರಿಗೆ ದಾಳಿಗೆ ಗುರಿಯಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದು, ಹೆಚ್ಚಿನ ವಿವರಗಳನ್ನು ದಾಖಲೆ ಪರಿಶೀಲನೆ ನಂತರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ವಿಚಾರಣೆಯ ಮಾಹಿತಿಗಳು ನಂಬಲರ್ಹ ಮೂಲಗಳಿಂದ ಬಯಲಾಗಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಸುಮಾರು 32ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿ ಬಹುತೇಕ ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಮತ್ತು ಆಪ್ತರ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಾಗಿದೆ.

ಅಂತಿಮವಾಗಿ ಡಿ.ಕೆ.ಶಿವಕುಮಾರ್ ಅವರು ನಾನು ಯಾವುದೇ ಸುಳ್ಳು ಹೇಳುವುದಿಲ್ಲ. ನನಗೆ ತಿಳಿದ ಎಲ್ಲ ಮಾಹಿತಿ ನೀಡಿದ್ದೇನೆ. ನನಗೆ ಹಾಗೂ ನನ್ನ ಪತ್ನಿಗೆ ರಿಯಲ್ ಎಸ್ಟೇಟ್ ಕಂಪೆನಿಗಳ ಒಪ್ಪಂದದಲ್ಲಿ ಬಂದ 102 ಕೋಟಿ ರೂ. ಹಣಕ್ಕೆ ತೆರಿಗೆ ಪಾವತಿಸಬೇಕಿದೆ. ಇನ್ನು ದಾಳಿ ವೇಳೆ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿರುವ 8.8 ಕೋಟಿ ರೂ.ಗೆ ತೆರಿಗೆ ಕಟ್ಟಬೇಕಿದೆ. ಉಳಿದಂತೆ ನಿಮ್ಮೆಲ್ಲ ಪ್ರಶ್ನೆಗಳಿಗೂ ಇನ್ನೊಂದು ವಾರದಲ್ಲಿ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವೈಯಕ್ತಿಕ ಹಾಗೂ ಕುಟುಂಬದ ಬ್ಯಾಂಕ್ ಖಾತೆಗಳ ವಿವರ ಸರಿಯಾಗಿ ನೆನಪಿಲ್ಲ. ಆದಾಯ ತೆರಿಗೆ ಪಾವತಿ ವೇಳೆ ಎಲ್ಲ ಮಾಹಿತಿಗಳನ್ನೂ ಸಲ್ಲಿಸಲಾಗಿದೆ. ಕುಟುಂಬದ ಸದಸ್ಯರು ಅಥವಾ ನಾನು ಯಾವುದೇ ಬ್ಯಾಂಕ್ ಲಾಕರ್ ಹೊಂದಿಲ್ಲ ಎಂದು ಅವರು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಚರ ಮತ್ತು ಸ್ಥಿರ ಆಸ್ತಿಗಳ ಕುರಿತು ಕೇಳಿರುವ ಮಾಹಿತಿಗೆ ಉತ್ತರ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ನಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿ ದೊಡ್ಡದಿದೆ. ಅದನ್ನು ಲಿಖಿತವಾಗಿಯೇ ಸಲ್ಲಿಸುತ್ತೇನೆ. ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ. ನಮ್ಮದು ಕೃಷಿಕ ಕುಟುಂಬ. ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದೇವೆ. ಬೆಂಗಳೂರಿನಲ್ಲಿ ಹಲವಾರು ಕಡೆ ಜಮೀನಿದೆ. ಗ್ರಾನೈಟ್ ಕ್ವಾರಿಗಳನ್ನು ಗುತ್ತಿಗೆ ಪಡೆದಿದ್ದೇವೆ. ಜಂಟಿ ಸಹಭಾಗಿತ್ವದಲ್ಲೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಗುಜರಾತ್ ಶಾಸಕರು ತಂಗಿದ್ದ ಈಗಲ್‍ಟನ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗ ನಾನು ನಿದ್ದೆಯ ಮಂಪರಿನಲ್ಲಿದ್ದೆ. ನರ್ವಸ್ ಆಗಿ ಕಾಗದಗಳನ್ನು ಹರಿದು ಹಾಕಿದೆ. ಆ ಚೂರುಗಳನ್ನು ಅಧಿಕಾರಿಗಳು ಜೋಡಿಸಿ ಜೋಪಾನವಾಗಿಟ್ಟಿದ್ದಾರೆ. ಆ ಘಟನೆ ಬಗ್ಗೆ ನನಗೆ ವಿಷಾದವಿದೆ. ಹರಿದು ಹಾಕಿದ ಕಾಗದಗಳಲ್ಲಿ ಮೊದಲನೆಯದು ತೊಂದರೆಯಲ್ಲಿರುವವರು ನೆರವು ಕೇಳಿ ನೀಡಿದ್ದ ಕಾಗದ ಪತ್ರ, ಎರಡನೆಯದು ಕುಟುಂಬಕ್ಕಾಗಿ ಚಿನ್ನಾಭರಣ ಖರೀದಿಸಲು ಮತ್ತು ಅದರ ಖರ್ಚು-ವೆಚ್ಚಗಳ ಕುರಿತು ಹಾಗೂ ಸೈಟು ನೋಂದಣಿ ಕುರಿತ ಮಾಹಿತಿ ಇದ್ದು, ಉಳಿದಂತೆ ಯಾವ ವಿಚಾರಗಳೂ ಆ ಚೀಟಿಯಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಸಂಬಂಧಿ ಶಶಿಕುಮಾರ್ ಅವರ ಮಗನಿಗೆ ವ್ಯವಹಾರ ಮಾಡಲು ಸಲಹೆ ನೀಡಿದ್ದೆ. ಮೈಸೂರು ಮಹಾರಾಜರ ಕುಟುಂಬಕ್ಕೆ ಸೇರಿದ ಆಸ್ತಿ ಖರೀದಿಸಲು ಒಪ್ಪಂದ ಮಾಡಿಕೊಳ್ಳುವ ಪ್ರಯತ್ನವನ್ನು ಅವರು ಮಾಡಿದ್ದರು. ಅದಕ್ಕೆ ಹಣಕಾಸು ನೆರವು ನೀಡುವಂತೆ ಸ್ನೇಹಿತ ಸಚಿನ್ ನಾರಾಯಣ್‍ಗೆ ನಾನೇ ಸೂಚನೆ ನೀಡಿದ್ದೆ. ಸಚಿನ್ ನಾರಾಯಣ್ ಮತ್ತು ನಾನು 10 ವರ್ಷಗಳಿಂದಲೂ ವ್ಯಾವಹಾರಿಕ ನಂಟು ಹೊಂದಿದ್ದೇವೆ. ಚೆಕ್ ಮೂಲಕವೇ ವ್ಯವಹಾರ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜ್ ಅವರೊಂದಿಗೆ ನಾವು ಯಾವುದೇ ಆರ್ಥಿಕ ವಹಿವಾಟು ಹೊಂದಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ನಮ್ಮ ಪಕ್ಷದ ನಾಯಕಿ ಎಂದು ಸ್ಪಷ್ಟಪಡಿಸಿದ ಡಿಕೆಶಿ ನ್ಯಾಷನಲ್ ಎಜುಕೇಷನ್ ಫೌಂಡೇಷನ್, ಗ್ರಾಮೀಣಾಭಿವೃದ್ಧಿ ಪ್ರಕಾಶನ ಹಾಗೂ ದಾನ-ಧರ್ಮ ಮಾಡುವ ಸಂಸ್ಥೆಯಾಗಿದೆ. ಅದಕ್ಕೆ ನಾನು ಅಧ್ಯಕ್ಷ. ನನಗೆ ಗೊತ್ತಿಲ್ಲದಂತೆ ಕೆಲವು ಭೂ ಖರೀದಿ ವ್ಯವಹಾರಗಳು ನಡೆದಿದ್ದು, ಅದಕ್ಕೆ ವಿವರಣೆ ಕೇಳಿ ನೋಟಿಸ್ ನೀಡಿದ್ದೇನೆ. ನನ್ನ ಮಗಳು ವಿದ್ಯಾಭ್ಯಾಸ ಮುಗಿಸಿದ್ದು, ಆಕೆ ಸ್ವಂತ ವ್ಯವಹಾರ ಮಾಡಬೇಕು ಎಂದು ಬಯಸಿದ್ದಾಳೆ. ಆಕೆಗೆ ವಿವಿಧ ಕಂಪೆನಿಗಳು, ಸ್ನೇಹಿತರು, ಹಿತೈಷಿಗಳು ಆರ್ಥಿಕ ಸಹಾಯ ಮಾಡಿದ್ದಾರೆ. ಶೋಭಾ ಡೆವಲಪರ್ಸ್‍ನಲ್ಲಿ ನನ್ನ ಪಾಲುದಾರಿಕೆ ಇದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿರುವ ರಾಜೇಂದ್ರ ಅವರು ನನ್ನ ಬಳಿ ಕೆಲಸ ಮಾಡುತ್ತಿದ್ದಾರೆ. ಆದರೆ, ನನ್ನ ಪರವಾಗಿ ಯಾವುದೇ ಆರ್ಥಿಕ ವ್ಯವಹಾರ ಮಾಡುತ್ತಿಲ್ಲ. ಕಳೆದ ವರ್ಷದ ಆದಾಯ ತೆರಿಗೆ ಪಾವತಿಸಿದ್ದೇನೆ. ಈ ವರ್ಷ ಶೀಘ್ರವೇ ರಿಟರ್ನ್ ಫೈಲ್ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ ಎಂದು ಮೂಲಗಳು ಹೇಳಿರುವುದು ವರದಿಯಾಗಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ