
ಟೆಹ್ರಾನ್:ಫೆ-18: ದಕ್ಷಿಣ ಇರಾನ್‌ನಲ್ಲಿ 66 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ದುರಂತಕ್ಕೀಡಾದ ಪರಿಣಾಮ ಎಲ್ಲಾ ಪ್ರಯಾಣಿಕರೂ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ತಿಳಿಸಿದೆ.
ರಾಜಧಾನಿ ಟೆಹ್ರಾನ್‌ನಿಂದ ದಕ್ಷಿಣಕ್ಕೆ 620 ಕಿ.ಮೀ ದೂರದ ಪರ್ವತಗಳ ನಡುವಣ ಸೆಮಿರೋಮ್ ಪಟ್ಟಣದಲ್ಲಿ ಪ್ರಾದೇಶಿಕ ಮಾರ್ಗದಲ್ಲಿ ಸಂಚರಿಸುವ ಅವಳಿ ಎಂಜಿನ್‌ನ ಟರ್ಬೋಪ್ರಾಪ್ ವಿಮಾನ ಎಟಿಆರ್-72 ಇಂದು ಬೆಳಗ್ಗೆ ದುರಂತಕ್ಕೀಡಾಯಿತು ಎಂದು ಅರೆ ಸರಕಾರಿ ಸುದ್ದಿಸಂಸ್ಥೆ ಫಾರ್ಸ್ ವರದಿ ಮಾಡಿದೆ.
ಈ ವಿಮಾನ ರಾಜಧಾನಿಯಿಂದ 780 ಕಿ.ಮೀ ದೂರದಲ್ಲಿರುವ ದಕ್ಷಿಣ ಇರಾನ್‌ನ ಯಾಸೂಜ್ ನಗರಕ್ಕೆ ಹೊರಟಿತ್ತು. ದುರ್ಗಮ ಪ್ರದೇಶಗಳಿಗೆ ವಿಮಾನ ಹಾರಾಟ ನಡೆಸುವುದರಲ್ಲಿ ಪರಿಣತಿ ಹೊಂದಿರುವ ಅರೆ ಸರಕಾರಿ ಅಸೆಮಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಇದಾಗಿತ್ತು ಎನ್ನಲಾಗಿದೆ.
ಇರಾನ್‌ನ ರೆಡ್ ಕ್ರೆಸೆಂಟ್ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಧಾವಿಸಿದೆ. ದಟ್ಟ ಮಂಜಿನಿಂದಾಗಿ ಗೋಚರತೆ ಅಸ್ಪಷ್ಟವಾಗಿತ್ತು. ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.