ಬೆಂಗಳೂರು, ಫೆ.17- ಕಾರ್ಯಕಾರಿ ಸಮಿತಿಯ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಳ ಮಾಡುವುದೂ ಸೇರಿದಂತೆ ಕೆಲವೊಂದು ನಿಯಮಾವಳಿ ತಿದ್ದುಪಡಿ ಹಾಗೂ ಚುನಾವಣಾ ಸುಧಾರಣಾ ಕ್ರಮ ಕುರಿತಂತೆ ಮಾರ್ಚ್ 15ರಂದು ಕುಂದಾಪುರದಲ್ಲಿ ವಿಶೇಷ ಸಭೆ ಕರೆಯಲು ಕನ್ನಡ ಸಾಹಿತ್ಯ ಪರಿಷತ್ ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು, ಕೇಂದ್ರ ಪ್ರದೇಶವನ್ನು ಬಿಟ್ಟು ಕುಂದಾಪುರದಲ್ಲಿ ವಿಶೇಷ ಸಭೆ ಕರೆಯಲು ಯಾವುದೇ ಕಾನೂನು ತೊಡಕಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ 20 ವರ್ಷಗಳಿಂದ ನಿಯಮಾವಳಿಗೆ ತಿದ್ದುಪಡಿ ತಂದಿರಲಿಲ್ಲ. ಹಾಗಾಗಿ ಕಾನೂನು ಮತ್ತು ಆಡಳಿತ ತಜ್ಞರನ್ನೊಳಗೊಂಡ ಸಮಿತಿ ಶಿಫಾರಸು ನೀಡಿತ್ತು. ಇದನ್ನು ಜಾರಿಗೆ ತರಲು ವಿಶೇಷ ಸಭೆಯಲ್ಲಿ ಚರ್ಚಿಸುತ್ತೇವೆ. ಎಲ್ಲ ಸದಸ್ಯರು ಸಮ್ಮತಿಸಿದರೆ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕುಂದಾಪುರದ ಕೋಟಾ ಗ್ರಾಮದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಈ ವಿಶೇಷ ಸಭೆ ನಡೆಯಲಿದೆ. ಎಲ್ಲ ಸದಸ್ಯರು ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ವಿಶೇಷ ಸಭೆಯ ಮುಖ್ಯಾಂಶಗಳು:
ಕಾರ್ಯಕಾರಿ ಸಮಿತಿಯ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಹೆಚ್ಚಳ ಮಾಡುವುದು, ಮತದಾನದಲ್ಲಿ ಪಾಲ್ಗೊಳ್ಳುವವರು ಈ ಮೊದಲು ಕೇವಲ ಕಸಾಪ ಗುರುತಿನ ಚೀಟಿಯನ್ನು ತರಬೇಕಿತ್ತು. ಇನ್ನು ಮುಂದೆ ಸಂಸದರು, ಶಾಸಕರ ಆಯ್ಕೆಗೆ ನಡೆಯುವ ಚುನಾವಣೆಯಂತೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ತರಬೇಕು. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ಪರಿಶಿಷ್ಟ ಜಾತಿ , ಮಹಿಳೆಯರು ಮತ್ತು ಸಂಘ ಸಂಸ್ಥೆಯವರು ಒಂದೊಂದು ನಾಮನಿರ್ದೇಶನ ಮಾಡಬಹುದಿತ್ತು. ಇನ್ನು ಮುಂದೆ ಇಬ್ಬರನ್ನು ನಾಮನಿರ್ದೇಶನ ಮಾಡುವ ಕುರಿತಂತೆ ಚರ್ಚಿಸಲಾಗುವುದು.
ಪರಿಶಿಷ್ಟ ಪಂಗಡಕ್ಕೆ ಈವರೆಗೆ ಇದುವರೆಗೆ ಯಾವುದೇ ನಾಮನಿರ್ದೇಶನ ಇರಲಿಲ್ಲ. ಅವರಿಗೂ ಒಂದು ನಾಮನಿರ್ದೇಶನ ಮೀಸಲಿಡುವುದು, ತೆಲಂಗಾಣ ರಾಜ್ಯದಲ್ಲಿ ಒಂದು ಕಸಾಪ ಘಟಕ ತೆರೆಯುವುದು, ಚುನಾವಣೆ ನಡೆಯುವ 75 ದಿನಗಳ ಮೊದಲೇ ಮತದಾರರ ಪಟ್ಟಿ ಸಿದ್ದಪಡಿಸುವುದನ್ನು 90 ದಿನಕ್ಕೆ ಹೆಚ್ಚಳ ಮಾಡುವುದು, ಬೆಂಗಳೂರಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಶೇ.35ರಷ್ಟು ಮತದಾನವಾಗುತ್ತಿತ್ತು. ರಾಜ್ಯದಲ್ಲಿ ಶೇ.50ರಷ್ಟು ಮತದಾನವಾಗುತ್ತಿತ್ತು. ಇದಕ್ಕೆ ಮತಗಟ್ಟೆಗಳ ಸಂಖ್ಯೆ ವಿರಳವಾಗಿದುದ್ದು ಕಾರಣ.
ಬೆಂಗಳೂರಿನಲ್ಲಿ ಒಂದೇ ಒಂದು ಮತಗಟ್ಟೆ ಇತ್ತು. ಇನ್ನು ಮುಂದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮತಗಟ್ಟೆ ಸ್ಥಾಪಿಸುವ ಕುರಿತು ಚರ್ಚಿಸಲಾಗುವುದು. ಗ್ರಾಮೀಣ ಭಾಗದಲ್ಲಿ 500 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸುವ ಕುರಿತು ಚರ್ಚಿಸಲಾಗುವುದು. ವಾರ್ಷಿಕ ಸದಸ್ಯತ್ವ ರದ್ದುಪಡಿಸುವುದು, ಸದಸ್ಯತ್ವ ಶುಲ್ಕ ಹೆಚ್ಚಳ ಮಾಡುವುದು ಸೇರಿದಂತೆ ಹಲವಾರು ತಿದ್ದುಪಡಿ ಮಾಡುವ ಕುರಿತು ವಿಶೇಷ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ಸಮ್ಮೇಳನ:
ರಾಜ್ಯದ ಶೇ.90ರಷ್ಟು ಮಂದಿ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಸುವಂತೆ ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಮಾತ್ರ ಬೇಡ ಎಂದಿದ್ದಾರೆ. ಹಾಗಾಗಿ ಜನಮನ್ನಣೆಗೆ ಆದ್ಯತೆ ನೀಡಿ ಇನ್ನು ಮುಂದೆ ಪ್ರತಿವರ್ಷ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಮನು ಬಳಿಗಾರ್ ತಿಳಿಸಿದರು.
ಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಡಾ.ಶೇಖರ್ ಅತಗುಂಡಿ, ವಾ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷರಾದ ಲಲಿತ ವೀರಪ್ಪ ಉಪಸ್ಥಿತರಿದ್ದರು.