ಜೋಹಾನ್ಸ್ಬರ್ಗ್:ಫೆ-15: ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.
ಎಎನ್ ಸಿ ಪಕ್ಷದಿಂದ ಜೇಕಬ್ ಜುಮಾ ಅವರನ್ನು ಉಚ್ಛಾಟನೆ ಮಾಡಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸುವ ಕುರಿತು ಪಕ್ಷ ನಿರ್ಧಾರ ಕೈಗೊಂಡ ಬೆನ್ನಲ್ಲೇ ಜುಮಾ ಇದೀಗ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸತತ 9 ವರ್ಷಗಳ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜೇಕಬ್ ಜುಮಾ ಅವರ ಖ್ಯಾತಿ ಕುಂದುತ್ತಾ ಬಂದಿತ್ತು. ಅಲ್ಲದೆ ತಮ್ಮದೇ ಸ್ವಪಕ್ಷೀಯರಿಂದಲೇ ಜುಮಾ ತೀವ್ರ ವಿರೋಧ ಎದುರಿಸಿತ್ತಿದ್ದರು. ಇತ್ತೀಚೆಗಷ್ಟೇ ಜುಮಾ ಅವರನ್ನು ಎಎನ್ ಸಿ ಪಕ್ಷದಿಂದ ವಜಾ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೂ ಮೊದಲು ರಾಜೀನಾಮೆ ನೀಡುವಂತೆ ಪಕ್ಷ ಮಾಡಿದ್ದ ಮನವಿಯನ್ನು ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ ಮುಕ್ತಾಯಗೊಳಿಸಿದ್ದ ಎಎನ್ ಸಿ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲು ನಿರ್ಧರಿಸಿತ್ತು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 107 ಸದಸ್ಯರು ಸುದೀರ್ಘ ಅವಧಿಯ ಸಭೆ ನಡೆಸಿ ಅಧ್ಯಕ್ಷರನ್ನು ವಜಾಗೊಳಿಸುವ ತೀರ್ಮಾನಕ್ಕೆ ಬಂದಿದ್ದರು ಎನ್ನಲಾಗಿತ್ತು.
ಇದೀಗ ಪಕ್ಷದ ಒತ್ತಾಯಕ್ಕೆ ಮಣಿದಿರುವ ಜೇಕಬ್ ಜುಮಾ ಅಂತಿಮವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.