ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ತನಿಖೆ

ನವದೆಹಲಿ:ಫೆ-15: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ(ಪಿಎನ್ ಬಿ) ಬೆಳಕಿಗೆ ಬಂದಿರುವ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆಯ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ 120 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ದೇಶದಲ್ಲಿಯೇ ಎರಡನೆ ಅತಿದೊಡ್ಡ ವಹಿವಾಟಿನ ಬ್ಯಾಂಕು ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಗಿದ್ದು, ನಿಯಂತ್ರಕವನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಕೆಲವು ಆಯ್ದ ಖಾತೆ ಬಳಕೆದಾರರಿಂದ ಈ ಭಾರೀ ವಂಚನೆ ನಡೆದಿದ್ದು ಇದರ ವಿಷಯವನ್ನು ಜಾರಿ ನಿರ್ದೇಶನಾಲಯ ಶಾಖೆಗಳಿಗೆ ವಹಿಸಲಾಗಿದೆ ಎಂದು ಹೇಳಿದೆ.

ಇದೊಂದು ಪ್ರತ್ಯೇಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವಂಚನೆ ಪ್ರಕರಣವಾಗಿದ್ದು ಸಂಯುಕ್ತ ಸಂಸ್ಥೆಗಳು ಇದರ ತನಿಖೆ ನಡೆಸಲಿವೆ ಎಂದು ಹಣಕಾಸು ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮುಂಬೈಯ ಪಿಎನ್ ಬಿಯ ಬ್ರಾಡಿ ಹೌಸ್ ಶಾಖೆಯ ವ್ಯವಸ್ಥಾಪಕ ಲೆಟರ್ಸ್ ಆಫ್ ಅಂಡರ್ ಟೇಕಿಂಗ್(ಎಲ್ ಒಯು)ನ್ನು ಹೊರಡಿಸಿದ್ದಾರೆ. ಎಲ್ ಒಯುವನ್ನು ಬೇರೆ ಬ್ಯಾಂಕುಗಳಿಂದ ಹಣವನ್ನು ಹೆಚ್ಚಿಸಲು ಮೇಲಾಧಾರವಾಗಿ ಬಳಸಲಾಗುತ್ತದೆ.ವಂಚನೆ ನಡೆದ ಹಣಕಾಸು ವಹಿವಾಟಿನ ಮೊತ್ತ ಅಂದಾಜು 1,771.69 ಡಾಲರ್ ಗಳಷ್ಟಾಗಿರಬಹುದು. ಪ್ರಕರಣವನ್ನು ಸಿಬಿಐಗೆ ಉಲ್ಲೇಖಿಸಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸಲ್ಲಿಕೆಯಲ್ಲಿ ಬ್ಯಾಂಕು ಯಾರ ಹೆಸರುಗಳನ್ನು ಉಲ್ಲೇಖಿಸದಿದ್ದರೂ ಕೂಡ ಇತರ 30 ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಮೊನ್ನೆ 12ರಂದು ಎಚ್ಚರಿಕೆಯ ನೊಟೀಸ್ ಕಳುಹಿಸಿ ಶತಕೋಟಿ ಸಂಪತ್ತಿನ ಒಡೆಯ ಜ್ಯುವೆಲ್ಲರಿ ವಿನ್ಯಾಸಗಾರ ನೀರವ್ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ವಂಚನೆ ಪ್ರಕರಣಕ್ಕೆ ಕಾರಣರು ಎಂದು ಹೇಳಿದೆ.

ಈ ಪ್ರಕರಣದಲ್ಲಿ ಸಹಕರಿಸುವಂತೆ ರಿಸರ್ವ್ ಬ್ಯಾಂಕ್ ಮತ್ತು ಸೆಬಿ ಹಾಂಕ್ ಕಾಂಗ್ ನಲ್ಲಿರುವ ಸ್ಟಾಕ್ ಎಕ್ಸ್ ಚೇಂಜ್ ಗಳನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಂಕ್ ಕಾಂಗ್ ನಲ್ಲಿರುವ ಭಾರತೀಯ ಮೂಲದ ಬ್ಯಾಂಕುಗಳ ಶಾಖೆಗಳಿಂದ ಸಾಲಗಳನ್ನು ಪಡೆದುಕೊಳ್ಳಲು ಎಲ್ಒಯುಗಳನ್ನು ಬಳಸಿಕೊಳ್ಳಲಾಗುತ್ತದೆ. ದಕ್ಷಿಣ ಆಫ್ರಿಕಾ ಸೇರಿದಂತೆ ವಜ್ರದ ಉದ್ಯಮಿಗಳು ಈ ಬ್ಯಾಂಕ್ ವಂಚನೆಯ ಹಿಂದೆ ವಿಚಾರಣೆಗೊಳಪಡುವ ಸಾಧ್ಯತೆಯಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಸಂಸ್ಥೆ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವ ಮತ್ತೊಂದು ಸಾರ್ವಜನಿಕ ವಲಯ ಬ್ಯಾಂಕನ್ನು ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ.

ಈ ಮಧ್ಯೆ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ನಲ್ಲಿ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಹಣಕಾಸು ಸಚಿವಾಲಯ ಎಲ್ಲಾ ಬ್ಯಾಂಕುಗಳಿಗೆ ವಸ್ತುಸ್ಥಿತಿ ವರದಿಯನ್ನು ಶೀಘ್ರದಲ್ಲಿ ಸಲ್ಲಿಸುವಂತೆ ಹೇಳಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಬ್ಯಾಂಕುಗಳಿಗೆ ಕಠಿಣ ಸೂಚನೆ ಹೊರಡಿಸಿರುವ ಹಣಕಾಸು ಸಚಿವಾಲಯ, ಹಗರಣದಲ್ಲಿ ಭಾಗಿಯಾಗಿರುವ ಯಾವುದೇ ದೊಡ್ಡ ತಿಮಿಂಗಿಲಗಳನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ಪ್ರಾಮಾಣಿಕವಾಗಿ ಬ್ಯಾಂಕಿನಿಂದ ಸಾಲ ಪಡೆದುಕೊಂಡವರಿಗೆ ಕಿರುಕುಳ ನೀಡುವುದಿಲ್ಲ ಎಂದು ಅಭಯ ನೀಡಿದೆ.

ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ಸತ್ಯಂ ಕಂಪ್ಯೂಟರ್ಸ್ ನ 9,000 ಕೋಟಿ ರೂಪಾಯಿ ಹಗರಣಕ್ಕಿಂತ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣ ಇದುವರೆಗೆ ದೇಶದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ್ದು ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ