ಬೆಂಗಳೂರು, ಫೆ.15-ಐಟಿ ದಾಳಿ ಸಂದರ್ಭದಲ್ಲಿ ನಾನು ಯಾವುದೇ ದಾಖಲೆ ಗಳನ್ನು ಹರಿದುಹಾಕಿಲ್ಲ. ಇಲಾಖೆಯಿಂದ ನನಗೆ ಯಾವುದೇ ನೋಟೀಸ್ ಕೂಡ ಬಂದಿಲ್ಲ ಎಂದು ಇಂಧನ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದರು.
ನನಗೆ ಕಾನೂನಿನ ಬಗ್ಗೆ ಅರಿವಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಪ್ರಕಾರ ವ್ಯವಹಾರ ಮಾಡಿದ್ದೇನೆ. ಮಾಧ್ಯಮಗಳನ್ನು ಬಳಸಿಕೊಂಡು ಕೆಲವರು ನನ್ನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಹುಲ್‍ಗಾಂಧಿಯವರು ಹೈದರಾಬಾದ್-ಕರ್ನಾಟಕದಲ್ಲಿ ನಡೆಸಿದ ಜನಾಶೀರ್ವಾದ ಯಾತ್ರೆ ಭಾರೀ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇಂತಹ ವಿವಾದವನ್ನು ಹುಟ್ಟು ಹಾಕಿರುವ ಸಾಧ್ಯತೆ ಇದೆ ಎಂದು ಹೇಳಿದರು.
ನನ್ನ ಮೇಲೆ ಐಟಿ ದಾಳಿ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗುಜರಾತ್ ಶಾಸಕರ ರಕ್ಷಣೆ ಜವಾಬ್ದಾರಿಯನ್ನು ಹೈಕಮಾಂಡ್‍ನವರು ನನಗೆ ಕೊಟ್ಟಿದ್ದರು. ಅಂದು ಬೆಳಗ್ಗೆ ನನ್ನ ಮನೆ ಮೇಲೆ ಐಟಿ ದಾಳಿ ನಡೆಯಿತು. ರಾಜ್ಯದ ಕೆಲ ನಾಯಕರು ಖುಷಿ ಪಟ್ಟಿದ್ದಾರೆ. ನನಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಪುನರುಚ್ಚರಿಸಿದರು.
ಅಂತಿಮ ವರದಿ ಸಲ್ಲಿಸಲು ಐಟಿಯವರಿಗೆ ಅವಕಾಶ ಇದೆ. ದಾಳಿಯಾದ ಮೇಲೆ ಐಟಿ ಇಲಾಖೆ ಮತ್ತು ನಾನು ಇಬ್ಬರೂ ಸಹ ಏನೂ ಬಿಡುಗಡೆ ಮಾಡುವಂತಿಲ್ಲ. ಮಾಧ್ಯಮಗಳನ್ನು ಬಳಸಿಕೊಂಡು ಕೆಲವರು ಖುಷಿಪಟ್ಟಿದ್ದಾರೆ. ನನ್ನ ಮನೆ ಮೇಲೆ ದಾಳಿಯಾದ ಕೆಲವೇ ಕ್ಷಣಗಳಲ್ಲಿ ದಾಖಲೆಗಳು ಕೇಂದ್ರ ಸಚಿವರಿಗೆ ಹೋಗುತ್ತವೆ ಎಂದರೆ ಏನರ್ಥ? ನಾನು ಯಾವುದೇ ದಾಖಲೆಗಳನ್ನು ಹರಿದುಹಾಕಿಲ್ಲ. ನಿಮ್ಮ ಬಳಿ ಇದ್ದರೆ ತೋರಿಸಿ ಎಂದು ಹೇಳಿದರು.
ಗುಜರಾತ್ ಶಾಸಕರ ಆತಿಥ್ಯ ವಹಿಸಿದ್ದೆ. ದೆಹಲಿಯಿಂದ ಬಂದೆ. ಅಲ್ಲಿಗೆ ಐಟಿ ಅಧಿಕಾರಿಗಳು ಬಂದರು. ದಾಳಿ ವೇಳೆ ಏನೇನೋ ತೆಗೆದುಕೊಂಡು ಹೋಗಿದ್ದಾರೆ, ಬಂಧನಕ್ಕೊಳಗಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನನ್ನ ವಿರುದ್ಧ ವರದಿ ನೀಡಲು ಅವಕಾಶ ಇದೆ. ಜನಾಶೀರ್ವಾದ ಯಾತ್ರೆ ನಡೆಯುತ್ತಿದೆ. ನನ್ನ ಮನೆ ಮೇಲೆ ದಾಳಿ ನಡೆದ ಎರಡು-ಮೂರು ತಿಂಗಳಲ್ಲಿ ಪಾರ್ಲಿಮೆಂಟ್‍ನಲ್ಲಿ ಚರ್ಚೆಯಾಗುತ್ತದೆ ಎಂದರೆ ಹೇಗೆ ಸಾಧ್ಯ? ಐದು ತಿಂಗಳಲ್ಲಿ ನೋಟೀಸ್ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಬರಲಿ, ನಾನು ತೆರಿಗೆ ನಿಯಂತ್ರಿಸುವ ಅಗತ್ಯವಿಲ್ಲ. ಸಾರ್ವಜನಿಕ ಸೇವೆ ಮಾಡುತ್ತಿದ್ದೇನೆ. ಜಾರಿ ನಿರ್ದೇಶನಾಲಯಕ್ಕಾದರೂ ಕಳುಹಿಸಲಿ, ಪರಪ್ಪನ ಅಗ್ರಹಾರಕ್ಕಾದರೂ ಕಳುಹಿಸಲಿ,ಟೈಮ್ ಬರಲಿ ನೋಡೋಣ ಎಂದು ಡಿಕೆಶಿ ತಿರುಗೇಟು ನೀಡಿದರು.
(ಫೋಟೋ ನಿರೂಪಣೆಗಾಗಿ ಮಾತ್ರ ಸೇರಿಸಲಾಗಿದೆ)