ಬೆಂಗಳೂರು, ಫೆ.14- ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೈಕ್ ಚಾಲನೆ ಮಾಡಿ ಅಪಾಯಕರ ರೀತಿಯಲ್ಲಿ ವೀಲಿಂಗ್ ಮಾಡಿಕೊಂಡು ಆತಂಕ ಸೃಷ್ಟಿಸುತ್ತಿದ್ದ ಮೂವರನ್ನು ಕೋರಾ ಠಾಣೆ ಪೋಲೀಸ್ರು ಬಂಧಿಸಿದ್ದಾರೆ.
ಸೈಯದ್ ಅಲ್ಮಾಸ್, ಅಬ್ದುಲ್ ಖುದಾಸ್ ಮತ್ತು ಅದ್ನಾನ್ ಮಹಮದ್ ಬಂಧಿತರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕರ ರೀತಿ ವೀಲಿಂಗ್ ಮಾಡಿಕೊಂಡು ಸಾರ್ವಜನಿಕರಿಗೆ ಅಪಾಯ ಉಂಟುಮಾಡುವವರ ವಿರುದ್ಧ ಪೋಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ಅದರಂತೆ ಸಂಜೆ 4 ಗಂಟೆ ಸಮಯದಲ್ಲಿ ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಸಿಬ್ಬಂದಿಗಳೊಂದಿಗೆ ತೆರಳಿ ರಾಷ್ಟ್ರೀಯ ಹೆದ್ದಾರಿ-48ರ ಅಜ್ಜಗೊಂಡನಹಳ್ಳಿ ಸರ್ಕಲ್ ಬಳಿ ಕಾರ್ಯಾಚರಣೆಗೊಂಡಿದ್ದಾಗ ಆಕ್ಸಸ್ ಬೈಕ್, ಹೀರೋ ಇಂಪಲ್ಸ್ ಹಾಗೂ ಜುಪಿಟರ್ ಬೈಕ್ಗಳಲ್ಲಿ ಸವಾರರು ಹೆಲ್ಮೆಟ್ ಧರಿಸದೆ ಅತಿವೇಗ ಹಾಗೂ ನಿರ್ಲಕ್ಷ್ಯತೆಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುವಂತೆ ಚಾಲನೆ ಮಾಡುತ್ತಿದ್ದುದು ಕಂಡುಬಂದಿದೆ.
ಅಲ್ಲದೆ, ಅಪಾಯಕರ ರೀತಿಯಲ್ಲಿ ವೀಲಿಂಗ್ ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡುತ್ತಿದ್ದುದನ್ನು ಗಮನಿಸಿ ಬೈಕ್ ಸವಾರರನ್ನು ತಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಇವರೆಲ್ಲರೂ ತುಮಕೂರು ಟೌನ್ ನಿವಾಸಿಗಳೆಂದು ತಿಳಿದುಬಂದಿದ್ದು, ಮೂವರನ್ನು ಬಂಧಿಸಲಾಗಿದೆ.
ಬೈಕ್ ಹಿಂಬದಿ ಸವಾರನನ್ನು ಮಹಮದ್ ರಯಾನ್ ಎಂದು ಹೇಳಲಾಗಿದೆ. ಈ ಸವಾರರ ಬಳಿ ಡಿಎಲ್ ಇಲ್ಲದಿರುವುದು ತನಿಖೆಯಿಂದ ಗೊತ್ತಾಗಿದೆ.
ಫೋಟೋ ಕ್ರೆಡಿಟ್: carmudi.pk (ಪ್ರಾತಿನಿಧ್ಯಕ್ಕಾಗಿ ಮಾತ್ರ)