ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಗಳ ವಂಚನೆ

ಬೆಂಗಳೂರು, ಫೆ.14- ಮೆಡಿಕಲ್ ಕಾಲೇಜುಗಳಲ್ಲಿ ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿ ವಿಲಾಸಿ ಜೀವನ ನಡೆಸುತ್ತಿದ್ದ ಜಾರ್ಖಂಡ್ ಮೂಲದ ಬಿಇ ಪದವೀಧರ ಹಾಗೂ ಉಡುಪಿ ಜಿಲ್ಲೆಯ ಬಿಬಿಎಂ ಪದವೀಧರನನ್ನು ಮೈಕೋ ಲೇಔಟ್ ಪೋಲೀಸ್ರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರದ ರಜತ್‍ಶೆಟ್ಟಿ (31) ಮತ್ತು ಜಾರ್ಖಂಡ್ ಮೂಲದ ಜಯಪ್ರಕಾಶ್ ಸಿಂಗ್ (31) ಬಂಧಿತ ವಂಚಕರು.
ಆರೋಪಿಗಳಿಂದ 91.45 ಲಕ್ಷ ರೂ. ನಗದು ಸೇರಿದಂತೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ಶೇರುಗಳು, ದುಬಾರಿ ಬೆಲೆಯ ವಾಹನಗಳು, 3 ಲಕ್ಷ ಬೆಲೆಯ ಚಿನ್ನಾಭರಣ, 5 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವಂಚಕರು ಮೆಡಿಕಲ್ ಸೀಟು ಆಕಾಂಕ್ಷಿಗಳಿಂದ ಪಡೆದ ಕೋಟ್ಯಂತರ ರೂ. ಹಣದಲ್ಲಿ ವಿದೇಶ ಪ್ರಯಾಣ ಮಾಡಿ ಮೋಜು-ಮಸ್ತಿ ಮಾಡುತ್ತ ವಿಲಾಸಿ ಜೀವನ ನಡೆಸಿರುವುದು ತನಿಖೆ ವೇಳೆ ತಿಳಿದುಬಂದಿದೆ.

ರಜತ್‍ಶೆಟ್ಟಿ ಎಲೆಕ್ಟ್ರಾನಿಕ್ ಸಿಟಿಯ ಡ್ಯಾಡೀಸ್ ಎಲಿಕ್ಸರ್ ಅಪಾರ್ಟ್‍ಮೆಂಟ್‍ನಲ್ಲಿ ಹಾಗೂ ಜಯಪ್ರಕಾಶ್ ಸಿಂಗ್ ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್ ಮಲ್ಟಿ ಡೈಮಂಡ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದನು.

ಬಿಟಿಎಂ ಲೇಔಟ್‍ನ 2ನೆ ಹಂತ, 6ನೆ ಮುಖ್ಯರಸ್ತೆಯಲ್ಲಿ ಗ್ಲೋಬಲ್ ಲರ್ನಿಂಗ್ ಅಂಡ್ ಎಜುಕೇಷನ್ ಕನ್ಸಲ್ಟೆನ್ಸಿ ಎಂಬ ಕಚೇರಿಯನ್ನು ತೆರೆದಿದ್ದ ಸುದರ್ಶನ್, ಸಂದೀಪ್ ಮತ್ತು ರಾಹುಲ್‍ಕುಮಾರ್ ನಕಲಿ ಹೆಸರು ಬಳಸಿಕೊಂಡು ಪ್ರತಿಷ್ಠಿತ ಕಾಲೇಜುಗಳಲ್ಲಿ ಪಿಜಿ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ನಂಬಿಸಿ ಅವರಿಂದ ಕೋಟ್ಯಂತರ ಹಣ ಪಡೆದು ಮೋಸ ಮಾಡಿದ್ದ ಬಗ್ಗೆ ಮೈಕೊ ಲೇಔಟ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.

ತನಿಖೆ ಕೈಗೊಂಡ ಪೋಲೀಸ್ರು ಕಾರ್ಯಾಚರಣೆ ನಡೆಸಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, ಇವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಆರೋಪಿ ಜಯಪ್ರಕಾಶ್ ಸಿಂಗ್ ಅತ್ತೆ ಮತ್ತು ಮಾವನ ಹೆಸರಿನಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿ ಇರಿಸಲಾಗಿದ್ದ 50 ಲಕ್ಷ ರೂ. ಫಿಕ್ಸೆಡ್ ಡಿಪಾಸಿಟ್, ಅವರ ವೈಯಕ್ತಿಕ ಉಳಿತಾಯ ಖಾತೆಗಳಲ್ಲಿದ್ದ 12 ಲಕ್ಷ ರೂ. ಹಾಗೂ ಪ್ರತಿಷ್ಠಿತ ಅಪಾರ್ಟ್‍ಮೆಂಟ್ ಒಂದರಲ್ಲಿ ಫ್ಲಾಟ್ ಖರೀದಿಸಲು ಆರೋಪಿ ರಜತ್‍ಶೆಟ್ಟಿಗೆ ನೀಡಿದ್ದ ಸುಮಾರು 20 ಲಕ್ಷ ರೂ. ಮುಂಗಡ ಹಣ ಹಾಗೂ ಬಲೋನ ಕಾರು, ಎನ್‍ಫೀಲ್ಡ್ ಬೈಕ್, 3 ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು, 5 ಲ್ಯಾಪ್‍ಟಾಪ್ ಹಾಗೂ ಇತರೆ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಆರೋಪಿಗಳು ಖಾಸಗಿ ವ್ಯಕ್ತಿಗಳಿಗೆ ನೀಡಿದ್ದ 9.45 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಇದಷ್ಟೇ ಅಲ್ಲದೆ ಆರೋಪಿಗಳು ವಿವಿಧ ಕಂಪೆನಿಗಳ ಷೇರುಗಳಲ್ಲಿ ತೊಡಗಿಸಿದ್ದ 12.5 ಲಕ್ಷ ರೂ.ತೊಡಗಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳು ಬೆಂಗಳೂರಿನ ವಿವಿಧ ಕಡೆ ಜೆಪಿ ಕನ್ಸಲ್ಟೆನ್ಸಿ, ಎಜೆಎ
ಇನ್ಫ್ರಾಸ್ಟ್ರಕ್ಚರ್, ಫೆÇೀರ್ನ್‍ಟಿರ್, ನಾರಾಯಣ ಕನ್ಸಲ್ಟೆನ್ಸಿ ಮತ್ತು ಐಆರ್‍ಎಸ್ ಕನ್ಸಲ್ಟೆನ್ಸಿ ಎಂಬ ಹೆಸರಿನಲ್ಲಿ ಕಚೇರಿಗಳನ್ನು ತೆರೆದು ವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆಯೂ ಸಹ ತನಿಖೆ ಮುಂದುವರಿದಿದೆ.

ವಂಚಕ ರಜತ್‍ಶೆಟ್ಟಿ ಮಣಿಪಾಲ್‍ನಲ್ಲಿ ಬಿಇ ಪದವಿ ಪಡೆದಿದ್ದು, ಎರಡು ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದು, ಈ ಹಿಂದೆಯೂ ಇದೇ ರೀತಿ ಮೆಡಿಕಲ್ ಸೀಟು ಕೊಡಿಸುವುದಾಗಿ ಜನರಿಗೆ ವಂಚಿಸಿದ್ದು, ಈಗಾಗಲೇ ಈತನ ವಿರುದ್ಧ 2013ರಲ್ಲಿ ಉಡುಪಿ ಜಿಲ್ಲೆಯ ಮಣಿಪಾಲ್ ಪೆÇಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಮತ್ತೊಬ್ಬ ವಂಚಕ ಜಯಪ್ರಕಾಶ್ ಸಿಂಗ್ ಬಿಬಿಎಂ ಪದವೀಧರನಾಗಿದ್ದು, ಈತನೂ ಸಹ ಈ ಹಿಂದೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಹಲವಾರು ಜನರಿಗೆ ವಂಚಿಸಿದ್ದು, ಈತನ ವಿರುದ್ಧ ಸಂಜಯನಗರ, ಕೊಡಿಗೆಹಳ್ಳಿ ಪೋಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ.

ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ, ಮೈಕೊ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಅಜಯ್ ಹಾಗೂ ಪಿಎಸ್‍ಐ ನಟರಾಜ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

(ಪ್ರಾತಿನಿಧ್ಯಕ್ಕಾಗಿ ಫೋಟೋ ಮಾತ್ರ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ