ವಾಷಿಂಗ್ಟನ್, ಫೆ.14- ಏಷ್ಯಾ ಪ್ರಾಂತ್ಯಕ್ಕೆ ಮತ್ತಷ್ಟು ಗಂಡಾಂತರ ತಂದೊಡ್ಡುವ ಹೊಸ ವಿಧಗಳ ಅಣ್ವಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ದಿಗೊಳಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಅಮೆರಿಕ ಬಹಿರಂಗಗೊಳಿಸಿದೆ.
ಭಾರತದ ಮೇಲೆ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ದಾಳಿ ಮುಂದುವರಿಯಲಿದೆ ಎಂಬ ಕಳವಳಕಾರಿ ವಿಚಾರ ಸಹ ಬಯಲಾಗಿದೆ.
ತಂತ್ರಕಾರಿ ಅಲ್ಪಗಾಮಿ (ಲಘು ಅಂತರದ) ಶಸ್ತ್ರಾಸ್ತ್ರಗಳೂ ಸೇರಿದಂತೆ ಹೊಸ ವಿಧಗಳ ಅಪಾಯಕಾರಿ ಅಣ್ವಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ದಿಗೊಳಿಸುತ್ತಿದ್ದು, ಇದರಿಂದ ನೆರೆಹೊರೆ ದೇಶಗಳಿಗೆ ಕಂಟಕವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಮುಖ್ಯಸ್ಥ ಡಾನ್ ಕೋಟ್ಸ್ ಹೇಳಿದ್ದಾರೆ.
ಸೆನೆಟ್ ಸಮಿತಿಯ ಗುಪ್ತಚರ ವಿಭಾಗದಿಂದ ಅಣ್ವಸ್ತ್ರಗಳ ಆತಂಕಗಳು ಕುರಿತ ಸಭೆಯೊಂದರಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಕೋಟ್ಸ್ ಈ ಕಳವಳಕಾರಿ ಸಂಗತಿಯನ್ನು ಬಹಿರಂಗಗೊಳಿಸಿದರು.
ಭಾರತದ ಕಣಿವೆ ರಾಜ್ಯ ಕಾಶ್ಮೀರದ ಸುಂಜ್ವಾನ್ ಸೇರಿದಂತೆ ವಿವಿಧೆಡೆ ಭಯೋತ್ಪಾದಕರು ದಾಳಿ ನಡೆಸಿ ಆರು ಮಂದಿ ಯೋಧರೂ ಸೇರಿದಂತೆ ಕೆಲವು ನಾಗರಿಕರನ್ನು ಹತ್ಯೆ ಮಾಡಿದ ಘಟನೆಗಳ ನಂತರ ಡಾನ್ ಕೋಟ್ಸ್ ಅವರ ಈ ಹೇಳಿಕೆ ಚಿಂತೆಗೀಡು ಮಾಡುವಂತಾಗಿದೆ.
ನವೀನ ತಂತ್ರಜ್ಞಾನದ ಅಲ್ಪಗಾಮಿ ಅಣ್ವಸ್ತ್ರಗಳು, ದೂರಗಾಮಿ ಖಂಡಾಂತರ ಕ್ಷಿಪಣಿಗಳು, ಸಮುದ್ರ ಮತ್ತು ವಾಯು ಮಾರ್ಗದಿಂದ ಉಡಾಯಿಸಬಲ್ಲ ಆಕ್ರಮಣಕಾರಿ ಕ್ಷಿಪಣಿಗಳೂ ಸೇರಿದಂತೆ ಮಾರಕ ಅಸ್ತ್ರಗಳನ್ನು ಪಾಕಿಸ್ತಾನ ಅಭಿವೃದ್ದಿಗೊಳಿಸುತ್ತಿದೆ. ಇವು ಭಯೋತ್ಪಾದಕರ ಕೈ ವಶವಾಗುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಕೆ ನೀಡಿದರು.
ಪಾಕಿಸ್ತಾನ ಕೃಪಾಪೆÇೀಷಿತ ಉಗ್ರಗಾಮಿ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧೆಡೆ ದಾಳಿ ಮುಂದುವರಿಸಲಿದೆ ಎಂಬ ಸಂಗತಿಯನ್ನೂ ಸಹ ಬಹಿರಂಗಗೊಳಿಸಿರುವ ಅವರು ಸೇನಾ ಶಿಬಿರ, ಯೋಧರು ಮತ್ತು ನಾಗರಿಕರು ಈ ಉಗ್ರರ ಗುರಿಯಾಗಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದೂ ತಿಳಿಸಿದರು.