ಮೈಸೂರು, ಫೆ.14- ಶಾಲೆಯೊಂದರಲ್ಲಿ ನಕಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಎ.ರಾಮದಾಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಾಲೆಗೆ ದಿಢೀರ್ ಭೇಟಿ ನೀಡಿದರು.
ಕುವೆಂಪು ನಗರದಲ್ಲಿರುವ ಜ್ಯೋತಿ ಶಾಲೆಗೆ ರಾಮದಾಸ್ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ದಿಢೀರ್ ಭೇಟಿ ನೀಡಿದ ವೇಳೆ ಅಲ್ಲಿ ಮತದಾರರ ಪಟ್ಟಿಗೆ ಸಲ್ಲಿಸುವ ಅರ್ಜಿಗಳನ್ನು ತಂದಿಟ್ಟುಕೊಂಡಿದ್ದುದು ಬೆಳಕಿಗೆ ಬಂದಿತು.
ಕಾಂಗ್ರೆಸ್ನ ಶಾಸಕರ ಕಡೆಯವರೊಬ್ಬರು ಈ ಶಾಲೆಗೆ ಅರ್ಜಿಗಳನ್ನು ತಂದುಕೊಟ್ಟಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಅರ್ಜಿಗೆ ಸಹಿ ಹಾಕಿಸುವ ಮೂಲಕ ನಕಲಿ ಮತದಾರರನ್ನು ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಈ ವೇಳೆ ರಾಮದಾಸ್ ಗಂಭೀರ ಆರೋಪ ಮಾಡಿದರು.
ಒಬ್ಬನೇ ವ್ಯಕ್ತಿ 11 ಸಾವಿರ ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿದಾರರ ಸಹಿಯನ್ನು ತಾನೇ ಮಾಡಿದ್ದಾನೆ. ಅಧಿಕಾರಿಗಳು ಮಾಡುವ ಸಹಿಯನ್ನು ಈತನೇ ಮಾಡಿದ್ದಾನೆ. ಹೀಗೆ ಸಹಿ ಮಾಡಿರುವ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧ ಪೆÇಲೀಸ್ ಠಾಣೆಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಹೀಗೆ 223 ಶಾಲೆಗಳಲ್ಲಿ ನಕಲಿ ಅರ್ಜಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ದೂರಿದರು.
ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕುವವರನ್ನು ಗುರುತಿಸಿ ಅಂತಹವರು ಮನೆ ಬಿಟ್ಟು ಹೋಗಿದ್ದಾರೆ, ಮೃತಪಟ್ಟಿದ್ದಾರೆ ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ ಆ ಪ್ರಕಾರವೇ ಅರ್ಜಿಗಳನ್ನುಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಆರ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆಂಬುದನ್ನು ಮನಗಂಡೇ ನಕಲಿ ಮತದಾರರನ್ನು ಸೃಷ್ಟಿಸುವ ಸಂಚನ್ನು ತಮ್ಮ ಶಾಸಕರ ಮೂಲಕ ಮಾಡಿಸಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರೂ ನಮ್ಮ ಅಭ್ಯರ್ಥಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ರಾಮದಾಸ್ ಹೇಳಿದರು.
ಫೋಟೋ ಕ್ರೆಡಿಟ್: Star of Mysore (ಪ್ರಾತಿನಿಧ್ಯಕ್ಕಾಗಿ ಮಾತ್ರ)