ಇಂದು ಆಟೋ ಕ್ಯಾಬ್ ಚಾಲಕ ಮಾಲಿಕರೊಂದಿಗಿನ ಕುಮಾರಸ್ವಾಮಿಯವರ ಸಂವಾದ ಕಾರ್ಯಕ್ರಮದ ಮಧ್ಯದಲ್ಲಿ ಭಾವನಾತ್ಮಕ ಘಟನೆಯೊಂದು ನಡೆಯಿತು. ಆಟೋ ಚಾಲಕರೊಬ್ಬರು ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜೊತೆಗಿದ್ದ ಮಗುವಿನ ಮುಖ ಮಾಸ್ಕ್ ನಿಂದ ಮುಚ್ಚಿದ್ದರು. ಆ ಮಗುವನ್ನು ನೋಡುತ್ತಿದ್ದಂತೆ ಕುಮಾರಸ್ವಾಮಿಯವರು ಒಂದು ಕ್ಷಣ ಭಾವುಕರಾಗಿ ಕಣ್ಣೊರೆಸಿಕೊಂಡರು.
ವರ್ಷಗಳ ಹಿಂದೆ ವೈದ್ಯರು ನಿಮ್ಮ ಮಗು ರೋಗ ನಿರೋಧಕ ಕ್ಷೀಣಿಸುವ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಮೂವತ್ತು ಲಕ್ಷ ವೆಚ್ಚವಾಗಲಿದೆ ಇಲ್ಲದಿದ್ದರೆ ನಿಮ್ಮ ಮಗು ಜೀವಂತವಾಗಿ ಉಳಿಯೋದು ಕಷ್ಟ ಎಂದು ಬಡ ಆಟೋ ಡ್ರೈವರ್ ದಂಪತಿಗಳಿಗೆ ಹೇಳಿದಾಗ ಆಕಾಶವೇ ಕಳಚಿ ತಲೆಗೆ ಬಿದ್ದಂತಹ ಅನುಭವ. ತಮ್ಮ ಬಂಧುಗಳು ಮಿತ್ರರು,ರಾಜಕಾರಣಿಗಳು,ಸಿನಿಮಾ ನಟರು ಮನೆಬಾಗಿಲಿಗೆ ಅಲೆದಾಡಿದರೂ ಲಕ್ಷ ರೂಪಾಯಿ ಹೊಂದಿಸೋಕು ಆ ಬಡ ಚಾಲಕ ಕುಟುಂಬಕ್ಕೆ ಸಾಧ್ಯವಾಗಲೇ ಇಲ್ಲ. ಇಡೀ ಕುಟುಂಬ ತಮ್ಮ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂತು.
ಸಾಕಷ್ಟು ಬಡವರಿಗೆ ಕುಮಾರಸ್ವಾಮಿಯವರು ಸಹಾಯ ಮಾಡಿದ್ದ ವಿಚಾರ ತಿಳಿದು ಕೊನೆಯ ಭರವಸೆ ಅಂತ ಮಗುವಿನ ಜೊತೆಗೆ ಕುಮಾರಸ್ವಾಮಿಯವರ ಮನೆಗೆ ತೆರಳಿದ ಆಟೋ ಚಾಲಕರ ಕುಟುಂಬ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಕೇಳಿಕೊಂಡರು.ಆದರೆ ಚಿಕಿತ್ಸೆಗೆ ಬರೊಬ್ಬರಿ ಮೂವತ್ತು ಲಕ್ಷ ಹಣ ಹೊಂದಿಸಬೇಕಿದ್ದರೂ ಆ ಮಗುವನ್ನು ನೋಡಿ ಕುಮಾರಸ್ವಾಮಿಯವರು ನಾನಿದ್ದೇನೆ ನಿಮ್ಮ ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ನನ್ನದೇ ಎಂದು ಆಶ್ವಾಸನೆ ನೀಡಿದ್ದು ಮಾತ್ರವಲ್ಲ ಆ ಮಗುವಿನ ಚಿಕಿತ್ಸೆಗಾಗಿ ಹಂತ ಹಂತವಾಗಿ ಮೂವತ್ತೆರಡು ಲಕ್ಷ ವ್ಯಯ ಮಾಡಿದರು.ಸಾವಿನ ಅಂಚಿನಲ್ಲಿದ್ದ ಒಂದು ಬಡ ಆಟೋ ಚಾಲಕ ಕುಟುಂಬವನ್ನು ಉಳಿಸಿದರು.
ಇಂದು ಮತ್ತೆ ಆ ಮಗುವಿನ ಮುಖವನ್ನು ನೋಡುತ್ತಿದ್ದಂತೆ ಭಾವನಾತ್ಮಕವಾಗಿ ಕುಮಾರಸ್ವಾಮಿಯವರ ಕಣ್ಣಂಚಿನಲ್ಲೂ ನೀರಿತ್ತು ಇಡೀ ಸಭಾಂಗಣವೇ ಒಂದು ಕ್ಷಣ ಗದ್ಗದಿತವಾಯಿತು.