ಬೆಂಗಳೂರು, ಫೆ.13- ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ಕಲ್ಪಿಸಿ ವಿಧಾನಸಭೆ ಚುನಾವಣೆಯಲ್ಲಿ ಕನ್ನಡಿಗರ ಆಸ್ಮಿತೆಯನ್ನು ಗೆಲ್ಲಲು ಮುಂದಾಗಿದ್ದ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
ಖಾಸಗಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ಸಾಧುವಲ್ಲ ಎಂದು ರಾಜ್ಯ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್.ನಾಯಕ್ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಖಾಸಗಿ ಅಥವಾ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗಾವಕಾಶಗಳನ್ನು ಕೊಡಲೇಬೇಕೆಂದು ಬಲವಂತವಾಗಿ ಇಲ್ಲವೆ ಕಡ್ಡಾಯಗೊಳಿಸುವುದು ಸಂವಿಧಾನದ ಅಧಿನಿಯಮ 19(1)ವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಎಜಿ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಸರ್ಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ಮಸೂದೆ ಜಾರಿ ಮಾಡಿದರೆ ನಾಳೆ ಖಾಸಗಿ ಸಂಸ್ಥೆಗಳು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಕಾಯ್ದೆ ಬಿದ್ದು ಹೋಗಿ ಸರ್ಕಾರಕ್ಕೆ ಮುಖಭಂಗವಾಗಬಹುದು. ಹೀಗಾಗಿ ಸರ್ಕಾರ ಈ ಪ್ರಸ್ತಾವನೆಯನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡುವಂತೆ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸರೋಜಿನಿ ಮಹಿಷಿ ವರದಿ ಪ್ರಕಾರ, ಕನ್ನಡಿಗರಿಗೆ ಖಾಸಗಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಉದ್ಯೋಗ ನೀಡಬೇಕೆಂದು ವರದಿ ಸಲ್ಲಿಸಲಾಗಿತ್ತು. ಈ ವರದಿ ಅನುಸಾರ ಕಾರ್ಮಿಕ ಇಲಾಖೆಗೆ ತಿದ್ದುಪಡಿ ಮಾಡುವ ಸಂಬಂಧ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿತ್ತು.
ಇದೀಗ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ನೀಡಿರುವ ವರದಿಯಂತೆ ಇದು ವಾಸ್ತವಕ್ಕೆ ವಿರುದ್ಧವಾದುದು ಮತ್ತು ಸಮರ್ಥನೀಯವಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡಿಗ ಎಂದರೆ ಯಾರು? ಇನ್ನು ಕನ್ನಡಿಗ ಎಂದರೆ ಯಾರು ಎಂಬುದರ ಬಗ್ಗೆಯೂ ವರದಿಯಲ್ಲಿ ಅನೇಕ ಕಾನೂನು ತಜ್ಞರು ವಿಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡಿಗ ಎನ್ನಲು ಕೇವಲ ಮಾತೃಭಾಷೆ, ವಾಸಸ್ಥಳ, ಹುಟ್ಟಿದ ದಿನಾಂಕ, ವ್ಯಾಸಂಗ ಇವುಗಳನ್ನಷ್ಟೇ ಮಾನದಂಡವಾಗಿಟ್ಟುಕೊಂಡರೆ ಆತನನ್ನು ಕನ್ನಡಿಗ ಎನ್ನಲು ಸಾಧ್ಯವೇ ಇಲ್ಲ.
ಹೊರರಾಜ್ಯದಿಂದ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ವಾಸಿಸುತ್ತಿರುವ ಅನೇಕರು ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಅಂತಹವರನ್ನು ಕನ್ನಡಿಗ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಉದಾಹರಣೆಗೆ ಬೆಂಗಳೂರಿನಲ್ಲೇ ಅನೇಕ ಪ್ರತಿಷ್ಠಿತ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ, ವಾಹನ ಚಾಲನಾ ಪರವಾನಗಿಯನ್ನು ಇಲ್ಲಿಂದಲೇ ಪಡೆದಿರುತ್ತಾರೆ. ಅವರ ಮಕ್ಕಳ ವಿದ್ಯಾಭ್ಯಾಸವೂ ಇಲ್ಲಿಯೇ ಮುಂದುವರಿದಿದೆ. ಇವರನ್ನು ಹೊರಗಿನವರು ಎಂದು ಪರಿಗಣಿಸುವುದು ಹೇಗೆ ಎಂದು ಎಜಿ ಪ್ರಶ್ನಿಸಿದ್ದಾರೆ.
ಮಧುಸೂದನ್ ಆರ್. ನಾಯಕ್ ನೀಡಿರುವ ವರದಿಯನ್ನು ಅನೇಕ ಕಾನೂನು ಹಾಗೂ ಸಂವಿಧಾನ ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ.
ಸರ್ಕಾರದಿಂದಲೇ ಎಡವಟ್ಟು: ಈ ಹಿಂದೆ ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ಹಾಗೂ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡುವುದಾಗಿ ಒಪ್ಪಿಕೊಂಡಿತ್ತು.
ಆದರೆ, ಈ ಸಂದರ್ಭದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ಒಪ್ಪಂದವನ್ನು ಅವರ ಜತೆ ಮಾಡಿಕೊಂಡಿಲ್ಲ. ವಾಸ್ತವ ಹೀಗಿರುವಾಗ ಶೇ.100ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಕೊಡುವಂತೆ ಬಲವಂತ ಇಲ್ಲವೆ ಒತ್ತಡ ಮಾಡುವುದು ಸಮರ್ಥನೀಯವಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ.
ಎಜಿ ನೀಡಿರುವ ವರದಿಯಿಂದ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಮಾಡುವ ಸಂಬಂಧ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ನೀಡುವ ಸಂಬಂಧ ಕಾರ್ಮಿಕ ಇಲಾಖೆಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿತ್ತು. ಹೀಗಾಗಿ ವರದಿ ನೀಡುವಂತೆ ಎಜಿಗೆ ಸೂಚಿಸಿತ್ತು.
(ಫೋಟೋವನ್ನು ಪ್ರತಿನಿಧಿಸುವುದಕ್ಕಾಗಿ ಮಾತ್ರ ಇರಿಸಲಾಗುತ್ತದೆ)