ನವದೆಹಲಿ, ಫೆ.12-ದೇಶದ ವಿವಿಧೆಡೆ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಾನವ ಕಳ್ಳ ಸಾಗಣೆ ನಿಯಂತ್ರಣ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಡಿಯಲ್ಲಿ ಈ ವಿಶೇಷ ದಳ ಅಸ್ತಿತ್ವಕ್ಕೆ ಬರಲಿದ್ದು, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಜಾಲವನ್ನು ಪತ್ತೆ ಮಾಡುವ ಜವಾಬ್ದಾರಿ ಹೊಂದಲಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳನ್ನು ವಾಣಿಜ್ಯ, ಲೈಂಗಿಕ ಶೋಷಣೆ, ವೇಶ್ಯಾವಾಟಿಕೆ ಮತ್ತು ಬಲವಂತದ ಜೀತದಾಳು ರೀತಿಯ ದುಡಿಮೆಗೆ ಒಳಪಡಿಸುತ್ತಿರುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ.
ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಎನ್ಐಇ ಅಡಿಯಲ್ಲಿ ವಿಶೇಷ ದಳ ರಚಿಸಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆದಾರರನ್ನು ಮಟ್ಟ ಹಾಕಲು ಕಾರ್ಯೋನ್ಮುಖವಾಗಿದೆ.
ದೇಶದ ಹಲವೆಡೆ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಳ್ಳಸಾಗಾಣಿಕೆ ಪ್ರಕರಣಗಳ ಬಗ್ಗೆ ತನಗೆ ವ್ಯಾಪಕ ದೂರುಗಳು ಬರುತ್ತಿವೆ ಎಂಬ ಗಂಭೀರ ಅಂಶವನ್ನು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗೃಹ ಸಚಿವಾಲಯಕ್ಕೆ ಪತ್ರಗಳನ್ನು ಬರೆದಿತ್ತು. ಅಲ್ಲದೆ, ಈ ಪಿಡುಗನ್ನು ನಿವಾರಿಸಲು ಪ್ರತ್ಯೇಕದಳ ಅಥವಾ ಘಟಕವನ್ನು ಸ್ಥಾಪಿಸುವ ಅಗತ್ಯತೆಯನ್ನು ತಿಳಿಸಿತ್ತು.
ಭಾರತದ ರಾಜ್ಯಗಳೊಳಗೆ ಮತ್ತು ದೇಶದ ಹೊರಗೆ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಎನ್ಐಎ ಸೂಕ್ತವಾದ ಸಂಸ್ಥೆ. ಈಗಾಗಲೇ ಇಂತಹ ಪ್ರಕರಣಗಳ ಬಗ್ಗೆ ಈ ಸಂಸ್ಥೆಯು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ ಕಾರಣ ಈ ಸಂಸ್ಥೆ ಅಡಿ ಅಥವಾ ಮಾರ್ಗದರ್ಶನದಲ್ಲಿ ವಿಶೇಷ ದಳ ರಚಿಸುವ ಅನಿವಾರ್ಯತೆ ಇದೆ ಎಂದು ಸಚಿವಾಲಯವು ತಿಳಿಸಿತ್ತು.
ಇದಕ್ಕೆ ಸ್ಪಂದಿಸಿರುವ ಗೃಹ ಸಚಿವಾಲಯವು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದ್ದು, ವಿಶೇಷ ದಳ ರಚನೆಗೆ ಕಾರ್ಯೋನ್ಮುಖವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾರ್ಚ್ನಲ್ಲಿ ಮತ್ತೆ ಆರಂಭವಾಗಲಿರುವ ಬಜೆಟ್ನ ಮುಂದುವರೆದ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುವ ವಿಶ್ವಾಸವನ್ನು ಸಚಿವಾಲಯ ವ್ಯಕ್ತಪಡಿಸಿದೆ.
ಮಹಿಳೆಯರ ಸುರಕ್ಷತೆಗಾಗಿ ಈಗಾಗಲೇ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ `ನಿರ್ಭಯಾ ನಿಧಿ’ ಅಸ್ತಿತ್ವದಲ್ಲಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ 324 ಕೋಟಿ ರೂ.ಗಳ ಹಣ ಮಂಜೂರು ಮಾಡಲು ಉದ್ದೇಶಿಸಿದೆ.
(ಫೋಟೋವನ್ನು ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾಗಿದೆ)