ಬೆಂಗಳೂರು, ಫೆ.10 (SNI)-ರಾಜ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಕರ್ನಾಟಕದಲ್ಲಿರುವುದು ಭ್ರಷ್ಟರು, ಲೂಟಿಕೋರರ ರಾಜ್ಯವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಯಶವಂಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತಾರೂಢ ಕಾಂಗ್ರೆಸ್‍ನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಅಧಿಕಾರಕ್ಕೆ ಬಂದ ತಕ್ಷಣ ಉಚಿತವಾಗಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡುವ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಕೆಲಸಕ್ಕಿಂತ ಹೆಚ್ಚು ಪುಕ್ಕಟೆ ಪ್ರಚಾರವನ್ನೇ ಮಾಡುತ್ತಿದೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಭಯದ ವಾತಾವರಣವಿದೆ ಎಂದು ಕಾಂಗ್ರೆಸ್ ನಾಯಕರು ನನ್ನ ಬಳಿ ಬಂದರೆ ದಾಖಲೆಗಳ ಸಮೇತ ನೀಡುತ್ತೇನೆ. ಯಾರಾದರೂ ಬರಲಿ ಎಂದು ಪಂಥಾಹ್ವಾನ ನೀಡಿದರು.
48 ರೂ.ಗೆ ಸಿಗುತ್ತಿದ್ದ ಅಕ್ಕಿಯನ್ನು ನಿಮಗೆ ನೀಡುತ್ತಿದ್ದಾರೆ. ಈ ರಾಜ್ಯ ಸರ್ಕಾರ ಕಡಿಮೆ ಮಾಡಿರುವುದು ಕೇವಲ 48 ರೂ. ಮಾತ್ರ. ಆದರೆ 84 ರೂ.ಗಳ ಪ್ರಚಾರ ಪಡೆಯುತ್ತಿದ್ದಾರೆ. ಇವರೇನೊ 100 ರೂ. ಕಡಿಮೆ ಮಾಡಿ ಅನ್ನಭಾಗ್ಯ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹೊಸಪೇಟೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಷ್ಟೇ ಇಲ್ಲಿಯೂ ಕಾರ್ಯಕರ್ತರು ಸೇರಿದ್ದಾರೆ. ಆದರೆ ಅಲ್ಲಿಗೆ ಸಿಗುವ ಪ್ರಚಾರ ನಮಗೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳು ಏನೇ ಸಮೀಕ್ಷೆ ನೀಡಿದರೂ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಯಾರೊಬ್ಬರು ತಡೆಯಲಾರರು. ಜೆಡಿಎಸ್ ಎಲ್ಲಿದೆ ಎಂಬುವರಿಗೆ ಫಲಿತಾಂಶ ಬಂದಾಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಮಸ್ಯೆಗಳನ್ನು ಹೋಗಲಾಡಿಸಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗುವುದು. ರಾಜ್ಯದ ನೆಲ-ಜಲ, ಭಾಷೆ ವಿಷಯದಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಗುಡುಗಿದರು.
ಫೋಟೋ ಕ್ರೆಡಿಟ್: newsx.com