ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೆ ನಾನು ಜೀವನದಲ್ಲಿ ಮಾಡಿದ ಮಹಾ ಅಪರಾಧ – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಫೆ.10 (SNI)-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತೀವಿ ಎಂದು ಸವಾಲು ಹಾಕಿದ್ದಾರೆ.

ಕೆಂಗೇರಿ ಉಪನಗರ ಕ್ಲಬ್ ಬಳಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಶಕ್ತಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆಯೋ ಅದೇ ಶಕ್ತಿ ನಿಮ್ಮನ್ನು ಆ ಸ್ಥಾನದಿಂದ ಕಿತ್ತೆಸೆಯುವ ಪ್ರಯತ್ನ ಮಾಡುತ್ತಿದೆ. ಅಧಿಕಾರದಿಂದ ನಿಮ್ಮನ್ನೇ ಕೆಳಗಿಳಿಸಿಯೇ ತೀರುತ್ತೇವೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯನವರೇ ನೀವೇನು ಮಾಡಿದ್ದೀರಿ ಎಂಬುದನ್ನು ಅಂಕಿಅಂಶ ಕೊಟ್ಟು ಮಾತನಾಡುತ್ತೇನೆ. ಖಜಾನೆ ಲೂಟಿ ಮಾಡುತ್ತಿದ್ದೀರಿ, ಇನ್ನೇನು ನಿಮ್ಮ  ಸಮಯ ಮುಗಿತ ಬಂತಲ್ಲ. ಇನ್ನು 120 ದಿನ ಮಾತ್ರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ  ಕೈ ಎತ್ತೆತ್ತಿ ಭಾಷಣ ಮಾಡ್ತಾರೆ ನೋಡಿದ್ದೇನೆ. ನಂಗೂ ಡ್ಯಾನ್ಸ್ ಮಾಡೋಕೆ ಬರುತ್ತೆ. ದೊಡ್ಡ ಸತ್ಯವಂತ ಸಿದ್ದರಾಮಯ್ಯ ಇವರ ಮನೆಯ ಮುಂದೆನೇ ಸತ್ಯ ಹರಿಶ್ಚಂದ್ರ ಹಾದುಹೋಗಿದ್ದಾರೆ ಎಂದು ಕಿಡಿಕಾರಿದರು.

ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೆ ನಾನು ಜೀವನದಲ್ಲಿ ಮಾಡಿದ ಮಹಾ ಅಪರಾಧ. ಇವರೊಬ್ಬ ಕೀಳುಮಟ್ಟದ ರಾಜಕಾರಣಿ ಎಂದ ಅವರು, ಸೋನಿಯಾ ಗಾಂಧಿ ಶಕ್ತಿ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‍ನಲ್ಲಿ ಸಿಎಂ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ ಎಂದು ಕುಟುಕಿದರು.

ಯಾರ್ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಾರೆ…? ಅಂತ ಬೀಗುತ್ತಿದ್ದೀರಾ, ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಾಗೂ ಕೆಂಪಣ್ಣ ಆಯೋಗ ವಿಚಾರ ಏನಾಯಿತು…? ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗೋಲ್ವ ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯದ ಜನರ ಮನಗೆಲ್ಲುವ ಸಂದರ್ಭದಲ್ಲಿ ನಾನು ನಿಮಗೆ ಬೇಕಾಗಿದ್ದೆ. ಹಾಗಾಗಿ ಮಂಗಳೂರಿನಲ್ಲಿ ನಡೆದ ರಾಣಿ ಅಬ್ಬಕ್ಕ ಜಯಂತಿ ವೇಳೆ ಬೇಕಾಗಿದ್ದೆಯಷ್ಟೇ. ಆದರೆ ಮುಖ್ಯಮಂತ್ರಿಯಾದ ಬಳಿಕ ಶ್ರವಣಬೆಳಗೊಳದ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಈ ಅಧಿಕಾರ ಎಷ್ಟು ದಿನ ಇರುತ್ತೆ ನಾನು ನೋಡುತ್ತೇನೆ ಎಂದು ಟಾಂಗ್ ನೀಡಿದರು

Photo Credit

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ