ಭಾರತದ ಸ್ಪಿನ್ನರ್‍ಗಳ ವೈಫಲ್ಯ ಡಕ್‍ವರ್ತ್ ಲೂಯಿಸ್ ನಿಯಮದಲ್ಲಿ ದಕ್ಷಿಣಆಫ್ರಿಕಾ ರೋಚಕ ಗೆಲುವು

ಜೋಹಾನ್ಸ್‍ಬರ್ಗ್, ಫೆ.11- ಭಾರತದ ಸ್ಪಿನ್ನರ್‍ಗಳ ವೈಫಲ್ಯ, ಹರಿಣಿಗಳ ಮಧ್ಯಮಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್‍ರ ರೋಚಕ ಆಟದಿಂದ ಡಕ್‍ವರ್ತ್ ಲೂಯಿಸ್ ನಿಯಮದಲ್ಲಿ ದಕ್ಷಿಣಆಫ್ರಿಕಾ ರೋಚಕ ಗೆಲುವು ಸಾಧಿಸಿದೆ.

ಸತತ 3 ಪಂದ್ಯಗಳನ್ನು ಗೆದ್ದು ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾ ನಿಗದಿತ ಓವರ್‍ಗಳಲ್ಲಿ 289 ರನ್‍ಗಳನ್ನು ಪೇರಿಸಿದರೂ ಕೂಡ ಎಬಿಡಿವಿಲಿಯರ್ಸ್‍ರ ಬ್ಯಾಟಿಂಗ್ ಬಲ ಹೊಂದಿದ್ದ ಹರಿಣಿಗಳು 5 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಆರಂಭಿಕ ಹೋರಾಟ:
ಕಳೆದ ಪಂದ್ಯಗಳಲ್ಲಿ ಆರಂಭಿಕ ಆಘಾತ ಅನುಭವಿಸಿ ಪಂದ್ಯವನ್ನು ಕೈಚೆಲ್ಲಿದ್ದ ಹರಿಣಿಗಳು ಈ ಬಾರಿ ಬ್ಯಾಟಿಂಗ್‍ನಲ್ಲಿ ಬದಲಾವಣೆ ಮಾಡಿದ್ದು ಕೂಡ ಪಂದ್ಯ ಗೆಲ್ಲಲು ಸಹಕಾರಿಯಾಗಿತ್ತು. ಆರಂಭಿಕ ಆಟಗಾರರಾದ ನಾಯಕ ಮಕ್ರಮ್ ಹಾಗೂ ಆಶೀಮ್ ಆಮ್ಲಾ 43 ರನ್‍ಗಳ ಜೊತೆಯಾಟ ನೀಡಿದ್ದಾಗ ಬೂಮ್ರಾ ಎಸೆದ 7.2 ನೇ ಓವರ್‍ನಲ್ಲಿ ಮಕ್ರಮ್ ಔಟಾಗುತ್ತಿದ್ದಂತೆ ವರುಣನ ಕಾಟ ಆರಂಭವಾಯಿತು.

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಡಕ್‍ವರ್ತ್‍ಲೂಯಿಸ್ ನಿಯಮದಡಿ 28 ಓವರ್‍ಗಳಲ್ಲಿ 202 ರನ್‍ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣಆಫ್ರಿಕಾಗೆ ಆಶೀಮ್ ಆಮ್ಲಾ (33 ರನ್,4 ಬೌಂಡರಿ) ಹಾಗೂ ಎಬಿಡಿವಿಲಿಯರ್ಸ್ (26 ರನ್,1 ಬೌಂಡರಿ, 2 ಸಿಕ್ಸರ್) ಭಾರತದ ಬೌಲರ್ಸ್‍ಗಳನ್ನು ದಂಡಿಸಿ ತಂಡವನ್ನು 100ರ ಗಡಿ ಮುಟ್ಟಿಸಿದರು.

ಮಿಲ್ಲರ್- ಕ್ಲಾಸೆನ್ ರೋಚಕ ಆಟ:
102 ರನ್‍ಗಳಿಗೆ ಪ್ರಮುಖ ನಾಲ್ಕು ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದ್ದ ಹರಿಣಿಗಳಿಗೆ ಯಜುವೇಂದ್ರ ಚಹಾಲ್ ಎಸೆತ ನೋ ಬಾಲ್ ಜೀವದಾನ ನೀಡಿದಂತಿತ್ತು.

ಯಜುವೇಂದ್ರ ಚಹಾಲ್ ಎಸೆತ ಬೌಲಿಂಗ್‍ನಲ್ಲಿ ಡೇವಿಡ್ ಮಿಲ್ಲರ್ ಕ್ಲೀನ್ ಬೋಲ್ಡ್ ಆಗಿದ್ದರು ಆದರೆ ಆ ಎಸೆತ ನೋ ಬಾಲ್ ಆಗಿದ್ದರಿಂದ ಜೀವದಾನ ಪಡೆದ ಮಿಲ್ಲರ್ 5ನೆ ವಿಕೆಟ್‍ಗೆ ಕ್ಲಾಸೆನ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಯಜುವೇಂದ್ರ ಚಹಾಲ್‍ರನ್ನೇ ಟಾರ್ಗೆಟ್ ಮಾಡಿಕೊಂಡಂತೆ ಬ್ಯಾಟಿಂಗ್ ಮಾಡಿದ ಮಿಲ್ಲರ್, ಕಲ್ಸನ್ 5 ವಿಕೆಟ್‍ಗೆ 72ರನ್‍ಗಳ ಬೃಹತ್ ಕಾಣಿಕೆ ನೀಡಿ ಅಪಾಯಕಾರಿಯಾಗಿದ್ದಾಗಲೇ ಚಹಾಲ್ 23.4 ಓವರ್‍ನಲ್ಲಿ ಮಿಲ್ಲರ್ (39 ರನ್, 4 ಬೌಂಡರಿ, 2 ಸಿಕ್ಸರ್) ರನ್ನು ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿಕೊಂಡರು.

ನಂತರ ಬಂದ ಪೆಹಿಲ್‍ಕೊವಾ (23 ರನ್, 1ಬೌಂಡರಿ, 3 ಸಿಕ್ಸರ್)ಕ್ಲಾಸೆನ್ (43 ರನ್, 5 ಬೌಂಡರಿ, 1 ಸಿಕ್ಸರ್)ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಭಾರತದ ಪರ ಕುಲ್‍ದೀಪ್‍ಯಾದವ್ 2 ವಿಕೆಟ್ ಕಬಳಿಸಿದರೆ, ಬೂಮ್ರಾ, ಪಾಂಡ್ಯಾ, ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಕೆಡವಿದರು.

ಹರಿಣಿಗಳ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಕಲ್ಸೆನ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಶಿಖರ್‍ಧವನ್‍ರ ಶತಕ (109 ರನ್, 10 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ ಅರ್ಧಶತಕ (75 ರನ್, 7 ಬೌಂಡರಿ, 1 ಸಿಕ್ಸರ್), ಧೋನಿಯ ರೋಚಕ ಆಟ(42 ರನ್,3 ಬೌಂಡರಿ, 1 ಸಿಕ್ಸರ್) ದಿಂದ 7 ವಿಕೆಟ್ ಕಳೆದುಕೊಡು 289 ರನ್‍ಗಳನ್ನು ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್:

ಭಾರತ 50 ಓವರ್‍ಗಳಲ್ಲಿ 289/7
ದಕ್ಷಿಣಆಫ್ರಿಕಾ 25.3 ಓವರ್‍ಗಳಲ್ಲಿ 207/5

ಫೋಟೋ ಕ್ರೆಡಿಟ್: sports.ndtv.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ