ಉತ್ತರ ಪ್ರದೆಶದಲ್ಲಿ 24 ವಾಂಟೆಡ್ ಕ್ರಿಮಿನಲ್ ಗಳ ಬಂಧನ; ಓರ್ವ ಕ್ರಿಮಿನಲ್ ಗುಂಡೇಟಿಗೆ ಬಲಿ

ಲಖನೌ:ಫೆ-3: ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ15 ಪೊಲೀಸ್‌ ಎನ್‌ಕೌಂಟರ್‌ಗಳು ನಡೆದಿದ್ದು, 24 ವಾಂಟೆಡ್‌ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ.

ಮುಜಾಫರ್‌ನಗರ, ಗೋರಖ್‌ಪುರ, ಬುಲಂದ್‌ಶಹರ್‌, ಶಾಮ್ಲಿ, ಹಾಪುರ್‌, ಮೀರತ್‌, ಸಹಾರಣ್‌ಪುರ, ಬಾಗ್‌ಪತ್‌, ಕಾನ್ಪುರ ಮತ್ತು ಲಖನೌ ಜಿಲ್ಲೆಗಳಲ್ಲಿ ಈ ಎನ್‌ಕೌಂಟರ್‌ಗಳು ನಡೆದಿವೆ. ಎಲ್ಲ ಪ್ರಕರಣಗಳಲ್ಲೂ ಪಿಸ್ತೂಲುಗಳು, ನಾಡಬಂದೂಕುಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಕ್ರಿಮಿನಲ್‌ಗಳು ಜನರಿಂದ ದೋಚಿದ ನಗದು, ಆಭರಣ ಮತ್ತು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಜಾಫರ್‌ನಗರದಲ್ಲಿ ಪೊಲೀಸ್‌ ಕಾರ್ಯಾಚರಣೆ ವೇಳೆ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಇಂದ್ರಪಾಲ್‌ನನ್ನು ಹೊಡೆದುರುಳಿಸಲಾಗಿದೆ. ಘಾಜಿಯಾಬಾದ್‌ ಮೂಲದ ಈತ 33 ಕ್ರಿಮಿನಲ್‌ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಪಟ್ಟಿ ಮಾಡಲಾದ ಕ್ರಿಮಿನಲ್‌ಗಳನ್ನು ಮಟ್ಟಹಾಕಲು ಈ ಎನ್‌ಕೌಂಟರ್‌ಗಳನ್ನು ನಡೆಸಲಾಗಿದೆ. ಇದೇ ವೇಳೆ 8 ಗ್ಯಾಂಗ್‌ಸ್ಟರ್‌ಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ಸ್ಟರ್‌ಗಳ ತಲೆಗೆ 15,000 ದಿಂದ 25,000 ರೂ ವರೆಗೆ ಬಹುಮಾನ ಘೋಷಿಸಲಾಗಿತ್ತು ಎಂದು ಡಿಜಿಪಿ ಓ.ಪಿ ಸಿಂಗ್‌ ತಿಳಿಸಿದ್ದಾರೆ.

ವಾಂಟೆಡ್‌ ಗ್ಯಾಂಗ್‌ಸ್ಟರ್‌ಗಳನ್ನು ಬಂಧಿಸಿ ಜೈಲಿಗೆ ತಳ್ಳುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ. ಸ್ವಯಂ ರಕ್ಷಣೆಗಾಗಿ ಮಾತ್ರವೇ ಅನಿವಾರ್ಯವಾಗಿ ಬೇರೆ ಆಯ್ಕೆಯೇ ಇಲ್ಲದ ಸಂದರ್ಭಗಳಲ್ಲಿ ಬಲ ಪ್ರಯೋಗ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ವಾಂಟೆಡ್‌ ಕ್ರಿಮಿನಲ್‌ಗಳು ಎಂದು ಪರಿಗಣಿಸಲಾದ ದುಷ್ಕರ್ಮಿಗಳು ಕಾನೂನು ಉಲ್ಲಂಘಿಸುವುದನ್ನು ನಿಲ್ಲಿಸುವುದೇ ಮೂಲ ಉದ್ದೇಶ ಎಂದು ಸಿಂಗ್ ತಿಳಿಸಿದ್ದಾರೆ.

Photo Credit: samacharplus.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ