ಬೆಂಗಳೂರು, ಏ.14-ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆಯೇ ಕಾಂಗ್ರೆಸ್ನವರಿಗೆ ಗೌರವವಿಲ್ಲ. ಹಾಗಾಗಿ ಅವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿಂದು ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ನವರಿಗೆ ಗೌರವ ಇಲ್ಲದ ಮೇಲೆ ಅವರ ಬಗ್ಗೆ ನಿಮಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಎರಡು ವರ್ಷದ ಹಿಂದೆ ಇದೇ ದಿನ ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಿಜೆಪಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಇಂದು ಸಹ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಸಂವಾದ ಮಾಡಿದ್ದೇನೆ. ಮಧ್ಯಾಹ್ನ ಕೆಲವು ಪೌರ ಕಾರ್ಮಿಕರೊಂದಿಗೆ ಸಹ ಭೋಜನ ಮಾಡಲು ನಿಶ್ಚಿಯಿಸಿದ್ದೇನೆ ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಲೋಕಸಭೆಗೆ ಕಾಂಗ್ರೆಸ್ ಪ್ರವೇಶ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಆದರೆ ನಾವು ಅಂಬೇಡ್ಕರ್ ಹೆಸರಿನಲ್ಲಿ ಲೋಕಸಭೆಯಲ್ಲಿ ಚರ್ಚಾಕೂಟ ಏರ್ಪಡಿಸಿದ್ದೆವು. ಅವರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆವುಎಂದರು.
ನ್ಯಾಯಾಂಗವೂ ಮೇಲಲ್ಲ , ಶಾಸಕಾಂಗವೂ ಮೇಲಲ್ಲ, ಕಾರ್ಯಾಂಗವೂ ದೊಡ್ಡದಲ್ಲ. ಈ ಎಲ್ಲ ಅಂಗಗಳ ನಡುವೆ ಸಮನ್ವಯತೆ ಇರುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಸಂವಿಧಾನವೇ ಧರ್ಮ ಗ್ರಂಥ ಎಂದು ಈಗಾಗಲೇ ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಇಂದು ಅಧಿಕಾರದಲ್ಲಿರುವುದು ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ ಎಂದು ಹೇಳಿದರು.