ಬೆಂಗಳೂರು, ಏ.13-ಮಳೆಯ ಬಗ್ಗೆ ಮೊದಲೇ ಮಾಹಿತಿ ಸಿಗುವಂಥೆ ಇನ್ನು ಮುಂದೆ ಸಿಡಿಲು ಹಾಗೂ ಬಿಸಿ ಗಾಳಿಯ ಮುನ್ಸೂಚನೆಯನ್ನು ಪಡೆಯಬಹುದಾದಂತಹ ನೂತನ ಆ್ಯಪನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪರಿಚಯಿಸುತ್ತಿದೆ.
ಮುಂಗಾರು ಮಳೆ ಮತ್ತಿತರ ಸಂದರ್ಭದಲ್ಲಿ ಜೋರಾಗುವ ಸಿಡಿಲಿನ ಆರ್ಭಟವನ್ನು ಮೊದಲೇ ತಿಳಿದು ಮುನ್ನೆಚ್ಚರಿಕೆ ವಹಿಸಲು ಸಹಕಾರಿಯಾಗುವಂತೆ ನೂತನ ಆ್ಯಪ್‍ನ್ನು ನಿರ್ಮಿಸಲಾಗಿದ್ದು, ಇಂದು ಸಂಜೆ ವಿಕಾಸಸೌಧದಲ್ಲಿ ಅಧಿಕೃತವಾಗಿ ಆ್ಯಪ್ ಬಿಡುಗಡೆಗೊಳ್ಳಲಿದೆ.
ಸಿಡಿಲಿನಿಂದ ಸಂಭವಿಸಬಹುದಾದ ಸಾವು-ನೋವು ತಪ್ಪಿಸಲು ಬಹಳಷ್ಟು ಉಪಯುಕ್ತವಾಗಲಿದ್ದು, ಸಿಡಿಲಿನ ಸಂದೇಶವನ್ನು ಮೊದಲೇ ನೀಡುವುದರಿಂದ ಎಚ್ಚರಿಕೆ ವಹಿಸಲು ಸಾಧ್ಯವಾಗಲಿದೆ.
ಇದುವರೆಗೂ ಹವಾಮಾನ ಇಲಾಖೆಯಿಂದ ಮುಂಗಾರು, ಹಿಂಗಾರು ಸೇರಿದಂತೆ ಮಳೆಯ ಮಾಹಿತಿಯನ್ನು ಒದಗಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಿಡಿಲು ಹಾಗೂ ಬೇಸಿಗೆ ಕಾಲದ ಬಿಸಿಗಾಳಿ ಕುರಿತ ಮಾಹಿತಿ ಒದಗಿಸಲು ಈ ಆ್ಯಪ್ ಚಾಲನೆಗೊಳ್ಳುತ್ತಿದೆ.