ಉನ್ನಾವೋ, ಏ.10- ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಅತ್ಯಾಚಾರ ಪ್ರಕರಣ ಹಾಗೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಘಟನೆಗಳ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ತನಿಖೆಗೆ ಆದೇಶಿಸಲಾಗಿದೆ.
ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಆನಂದ್ಕುಮಾರ್ ಅವರು ಉನ್ನಾವೋದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
ಈ ಮಧ್ಯೆ ಅತ್ಯಾಚಾರ ಆರೋಪಿ, ಬಿಜೆಪಿ ಶಾಸಕ ಸಿಂಗ್ ಅವರ ಸೋದರ ಅತುಲ್ಸಿಂಗ್ ಅವರನ್ನು ಇಂದು ಮುಂಜಾನೆ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸೇಂಗರ್ ಅವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪ ಮಾಡಿದ್ದ ಮಹಿಳೆಯ ತಂದೆ ಪೆÇಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿತ್ತು.
ಕುಲ್ದೀಪ್ ಮತ್ತು ಅವರ ಸೋದರರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಮಹಿಳೆಯೊಬ್ಬರು ಆರೋಪ ಮಾಡಿದ್ದರು. ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಎದುರೇ ಸಂತ್ರಸ್ತಳ ಕುಟುಂಬ ಆತ್ಮಹತ್ಯೆಗೆ ಮುಂದಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ತಂದೆಯನ್ನು ಪೆÇಲೀಸರು ಬಂಧನಕ್ಕೆ ಒಳಪಡಿಸಿದ್ದರು. ಮಹಿಳೆಯ ತಂದೆ ಪೆÇಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಇನ್ನು ಮಹಿಳೆಯ ಕುಟುಂಬಸ್ಥರು ಇದೊಂದು ಕೊಲೆಯೆಂದು ಆರೋಪ ಮಾಡಿದ್ದರು.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಅಧಿಕಾರಿಗಳು, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ಪ್ರಕರಣದಲ್ಲಿ ಅಧಿಕಾರಿಗಳ ತಪ್ಪಿರುವುದು ಸಾಬೀತಾದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಸರ್ಕಾರ, ಆರು ಪೆÇಲೀಸರನ್ನು ಅಮಾನತು ಮಾಡಿದೆ. ಅಲ್ಲದೆ, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಲಾಗಿದೆ.