ಲಖನೌ:ಏ-೧೩: ಶೌಚಾಲಯ ನಿರ್ಮಾಣಕ್ಕೆ ಎರಡನೇ ಕಂತಿನ ಹಣ ಬಿಡುಗಡೆ ಮಾಡದೇ ವಿಳಂಬಮಾಡುತ್ತಿರುವುದರಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಧಿಕಾರಿಯ ಕಾರಿಗೆ ಮುತ್ತಿಗೆ ಹಾಕಿ, ಕಾರಿನ ಬ್ಯಾನಟ ಹತ್ತಿದ್ದ ಪ್ರತಿಭಟನಾಕಾರರನ್ನು ಬರೊಬ್ಬರಿ 4 ಕಿ.ಮೀ ದೂರ ಹೊತ್ತು ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪೂರ್ವ ಉತ್ತರ ಪ್ರದೇಶ ರಾಮ್ ನಗರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರಾಮನಗರ್ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತ ಶೌಚಾಲಯಗಳ ನಿರ್ಮಾಣ ಮಾಡಿತ್ತು. ಆದರೆ, ಈ ಸಂಬಂಧ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿತ್ತು. ಸರ್ಕಾರದ ಈ ಧೋರಣೆಯಿಂದ ಕಾರ್ಮಿಕರು ಬೇಸತ್ತು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಇತ್ತೀಚೆಗೆ ರಾಮನಗರ್ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿ ಪಂಕಜ್ ಕುಮಾರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದರು. ಪಂಕಜ್ ಕುಮಾರ್ ಕಾರು ಹತ್ತುತ್ತಿದ್ದಂತೆಯೇ ಪ್ರತಿಭಟನಾಕಾರರು ಅವರ ಕಾರು ತಡೆದರು. ಈ ವೇಳೆ ಪ್ರತಿಭಟನಾಕಾರನೋರ್ವ ಕಾರಿನ ಬ್ಯಾನಟ್ ಹತ್ತಿದ್ದ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಕೆಳೆಗ ಇಳಿಯುವಂತೆ ಆಕ್ರೋಶದಿಂದು ಹೇಳಿದರು.
ಆದರೆ ಇದಕ್ಕೆ ಸೊಪ್ಪು ಹಾಕದ ಪ್ರತಿಭಟನಾ ನಿರತ ವ್ಯಕ್ತಿ ಹೀಗೆ ಇರುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಹಾಗೆಯೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಸುಮಾರು 4 ಕಿ.ಮೀ ದೂರದವರೆಗೂ ಪ್ರತಿಭಟನಾ ಕಾರನನ್ನು ಪಂಕಜ್ ಕುಮಾರ್ ಹೊತ್ತೊಯ್ದಿದ್ದು ಮಾತ್ರವಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ಮಾರ್ಗ ಮಧ್ಯೆ ಪಂಕಜ್ ಹಾಗೂ ಪ್ರತಿಭಟನಾ ಕಾರ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದು, ಕಾರು ಸುಮಾರು 4 ಕಿ.ಮೀ ದೂರ ಸಾಗಿದ ಬಳಿಕ ಸ್ಪೀಡ್ ಬ್ರೇಕರ್ ಬಂದಾಗ ಕಾರು ನಿಂತಿದೆ. ಈ ವೇಳೆ ಪ್ರತಿಭಟನಾಕಾರ ಇಳಿದು ಹೋಗಿದ್ದಾನೆ.
ಅದೃಷ್ಟವಶಾತ್ ಆತನಿಗೇನು ಆಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅಧಿಕಾರಿಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
Scary ride, UP govt official drives, 4 kms with man clinging onto car bonnet