ಬೆಂಗಳೂರು, ಏ.12-ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾಗುವ ಅನುದಾನದ ನಾಲ್ಕನೆ ಕಂತು ಬಿಡುಗಡೆಯಾಗಿಲ್ಲ.
ಪ್ರತಿ ಶಾಸಕರಿಗೆ ವಾರ್ಷಿಕ ಎರಡು ಕೋಟಿ ರೂ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾಗುತ್ತದೆ. ಆದರೆ, ಪ್ರತಿ ಕಂತಿನಲ್ಲಿ ಸುಮಾರು 50 ಲಕ್ಷ ರೂ.ನಂತೆ ಮೂರು ಕಂತುಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದ್ದು, ಉಳಿದ 50 ಲಕ್ಷ ರೂ. ಬಿಡುಗಡೆಯಾಗಿಲ್ಲ.
ಈ ನಡುವೆ ರಾಜ್ಯ ವಿಧಾನಸಭೆಗೆ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗಿದ್ದು, ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಪ್ರಸ್ತುತ ವಿಧಾನಸಭೆಯ ಶಾಸಕರು ಮುಂದಿನ ತಿಂಗಳು ನಿವೃತ್ತಿ ಹೊಂದುತ್ತಿದ್ದಾರೆ. ಹೀಗಾಗಿ ನಾಲ್ಕನೇ ಕಂತು ಶಾಸಕರಿಗೆ ಲಭ್ಯವಾಗುವುದಿಲ್ಲ.
ಕಳೆದ ನ.30ರಂದು ಮೂರನೇ ಕಂತಿನ ಅನುದಾನ ತಲಾ 50.1152 ಲಕ್ಷ ರೂ.ನಂತೆ 149.33ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಯೋಜನೆ ಇಲಾಖೆ ಈ ಹಣವನ್ನು ಬಿಡುಗಡೆ ಮಾಡಿತ್ತು.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಲಾದ ಅನುದಾನ ಬಳಕೆಯಾದ ನಂತರ ಮುಂದಿನ ಕಂತನ್ನು ಸರ್ಕಾರ ಬಿಡುಗಡೆ ಮಾಡಲಿದೆ.
ಆದರೆ, ಬಹಳಷ್ಟು ಶಾಸಕರು ಸಕಾಲದಲ್ಲಿ ಅನುದಾನವನ್ನು ಖರ್ಚು ಮಾಡಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿತ್ತು. ಚುನಾವಣಾ ವೇಳಾಪಟ್ಟಿ ಮಾ.27ರಂದು ಪ್ರಕಟವಾಗಿದೆ. ಕಳೆದ ಆರ್ಥಿಕ ವರ್ಷ ಮಾ.31ಕ್ಕೆ ಅಂತ್ಯಗೊಂಡಿದೆ. ಅಷ್ಟರಲ್ಲಿ ಸರ್ಕಾರ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ ಬಿಡುಗಡೆ ಮಾಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.