ಬೆಂಗಳೂರು, ಏ.12- ಕಾಂಗ್ರೆಸ್ ಹುರಿಯಾಳುಗಳ ಆಯ್ಕೆಯಲ್ಲಿ ಅಂತಿಮ ಸುತ್ತಿನ ಕಸರತ್ತು ನಡೆಯುತ್ತಿದ್ದು, ಆಕಾಂಕ್ಷಿಗಳು ಇಂದು ಬೆಳಗ್ಗೆ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ನಡೆಸಿದರು.
ತಮ್ಮ ಪುತ್ರನಿಗೆ ಸರ್ ಸಿ.ವಿ.ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಅವರು ರಾಜಕೀಯ ಪರಿಸ್ಥಿತಿ ಮತ್ತು ಒತ್ತಡಗಳ ಕುರಿತು ಮಹದೇವಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಟಿ.ನರಸೀಪುರ ಕ್ಷೇತ್ರದಿಂದ ಮೊದಲು ಸುನೀಲ್ ಬೋಸ್ನನ್ನು ಕಣಕ್ಕಿಳಿಸಿ ತಾವು ಸಿ.ವಿ.ರಾಮನ್ನಗರ ಕ್ಷೇತ್ರದಿಂದ ಸ್ಪರ್ಧಿಸಲು ಮಹದೇವಪ್ಪ ನಿರ್ಧರಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಟಿ.ನರಸೀಪುರದಿಂದ ತಾವೇ ಅಖಾಡಕ್ಕಿಳಿಯುತ್ತಿದ್ದು, ಸಿ.ವಿ.ರಾಮನ್ನಗರಕ್ಕೆ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಬೆಂಗಳೂರಿನ ಮಟ್ಟಿಗೆ ಸಿ.ವಿ.ರಾಮನ್ನಗರ, ಪುಲಿಕೇಶಿನಗರ, ಮಹಾಲಕ್ಷ್ಮಿಲೇಔಟ್, ಜಯನಗರ ಹೈವೋಲ್ಟೇಜ್ ಕ್ಷೇತ್ರಗಳಾಗಿ ಬದಲಾಗಿವೆ. ಸರ್ ಸಿ.ವಿ.ರಾಮನ್ನಗರ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಪಿ.ರಮೇಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಮಹದೇವಪ್ಪ ಅವರ ಪ್ರವೇಶದಿಂದಾಗಿ ರಮೇಶ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗದೆ ತ್ರಿಶಂಕು ಸ್ಥಿತಿ ಎದುರಾಗಿದೆ.
ಈ ನಡುವೆ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೊಟ್ಟು ಕಳೆದ ಬಾರಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಸನ್ನಕುಮಾರ್ ಅವರಿಗೆ ಸಿ.ವಿ.ರಾಮನ್ನಗರ ಕ್ಷೇತ್ರದಿಂದ ಟಿಕೆಟ್ ನೀಡುವ ಪ್ರಯತ್ನಗಳು ನಡೆದಿವೆ. ಮೇಯರ್ ಸಂಪತ್ರಾಜ್ ಅವರು ಈ ಎರಡೂ ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ರಾಜಕೀಯದ ಒತ್ತಡ ಹೆಚ್ಚಾಗಿದೆ.
ಅಖಂಡ ಶ್ರೀನಿವಾಸ್ಮೂರ್ತಿ ಅವರಿಗೆ ಪುಲಿಕೇಶಿನಗರದಿಂದಲೇ ಸ್ಪರ್ಧಿಸಲು ಅವಕಾಶ ನೀಡಿಬೇಕೆಂದು ಪಟ್ಟು ಹಿಡಿದಿರುವ ಆರು ಮಂದಿ ಜೆಡಿಎಸ್ ಬಂಡಾಯ ಶಾಸಕರಾಗಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಡಿಕೆಶಿ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಜಮೀರ್ ಅಹಮ್ಮದ್ಖಾನ್ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು. ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೈ ತಪ್ಪಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪ್ರಸನ್ನಕುಮಾರ್ ಅವರಿಗೆ ಸರ್ ಸಿ.ವಿ.ರಾಮನ್ನಗರದಿಂದ ಸ್ಪರ್ಧಿಸಲು ಅವಕಾಶ ನೀಡಿ. ನಾವು ಅವರಿಗೆ ಬೆಂಬಲವಾಗಿರುತ್ತೇವೆ. ಅಖಂಡ ಶ್ರೀನಿವಾಸಮೂರ್ತಿಗೆ ಪುಲಕೇಶಿನಗರದಿಂದಲೇ ಸ್ಪರ್ಧಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್- ಪರಮೇಶ್ವರ್ ಜಟಾಪಟಿ:
ಪಾವಗಡ ವಿಧಾನಸಭಾ ಕ್ಷೇತ್ರದಿಂದ ವೆಂಕಟರಮಣಪ್ಪ ಅವರಿಗೆ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ಸಮ್ಮತಿಸಿದ್ದು, ಏಕ ವ್ಯಕ್ತಿಯ ಹೆಸರನ್ನು ಸ್ಕ್ರೀನಿಂಗ್ ಕಮಿಟಿಯಲ್ಲಿ ಅನುಮೋದಿಸಿದೆ. ಆದರೆ, ಇದಕ್ಕೆ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಬೆಂಬಲಿಗ ಬಲರಾಮ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿ ಮುಂದೆ ಕಳುಹಿಸುವಂತೆ ಒತ್ತಡ ಹೇರಿದ್ದಾರೆ.
ಬಲರಾಮ್ ಪಾವಗಡ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಸರ್ಕಾರದ ಪರವಾಗಿ ಶ್ರಮಿಸಿದ್ದರು. ಈ ನಿಟ್ಟಿನಲ್ಲಿ ಅವರಿಗೆ ತಾಲ್ಲೂಕಿನಲ್ಲಿ ಒಳ್ಳೆಯ ಹೆಸರಿದ್ದು, ಗೆಲ್ಲುವ ಸಾಧ್ಯತೆಗಳಿವೆ. ಅವರಿಗೇ ಟಿಕೆಟ್ ಖಚಿತಪಡಿಸಬೇಕೆಂದು ಡಿಕೆಶಿ ಒತ್ತಡ ಹೇರುತ್ತಿದ್ದಾರೆ. ಇಲ್ಲದೇ ಹೋದರೆ ಕೇಂದ್ರ ಚುನಾವಣಾ ಸಮಿತಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಶಿವಕುಮಾರ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಟಿಕೆಟ್ ಹಂಚಿಕೆ ಸಂಬಂಧ ರಾಜಕೀಯ ಒತ್ತಡಗಳು ಹೆಚ್ಚಿದ್ದು, ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತರಾದ ಕೇಶವಮೂರ್ತಿ, ಮಂಜುಳಾ ಪುರುಷೋತ್ತಮ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ಗುಂಡೂರಾವ್ ತಮ್ಮ ಆಪ್ತ ಗಿರೀಶ್ ಕೆ.ನಾಶಿ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆ.
ತರೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಶ್ರೀನಿವಾಸ್ ಅವರು ಎರಡು ದಿನಗಳಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಗೆ ಎಡತಾಕುತ್ತಿದ್ದು, ಅವಕಾಶ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಹೊರಡುವ ಮುನ್ನ ಸಚಿವರಾದ ಎಂ.ಆರ್.ಸೀತಾರಾಮ್, ಎಂ.ಬಿ.ಪಾಟೀಲ್, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಶಾಸಕ ಎನ್.ಎ.ಹ್ಯಾರಿಸ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಅಂತಿಮ ಸುತ್ತಿನ ಲಾಬಿ ನಡೆಸಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ನೀಡಬೇಕು. ಕಳೆದ ಬಾರಿ ಕಾಂಗ್ರೆಸ್ನಿಂದ ಗೆದಿದ್ದ ಅಂಬರೀಶ್ ಅವರು ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕುಡಿಯುವ ನೀರಿಗೂ ತೊಂದರೆ ಕೊಟ್ಟರು. ಈ ಬಾರಿ ಅಂಬರೀಶ್ ಬದಲಾಗಿ ಗಣಿಗ ರವಿಕುಮಾರ್ಗೆ ಟಿಕೆಟ್ ಕೊಡಬೇಕೆಂದು ಸುಮಾರು 100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.