ನವದೆಹಲಿ, ಏ.11-ಸರ್ವರಿಗೂ ಕೈಗೆಟುಕುವ ದರದಲ್ಲಿ ಇಂಧನ ಸುಲಭವಾಗಿ ಲಭ್ಯವಾಗಬೇಕು ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇದಕ್ಕಾಗಿ ಸಮಂಜಸ ಮತ್ತು ಜವಾಬ್ದಾರಿಯುತವಾಗಿ ಕಡಿಮೆ ಬೆಲೆ ನಿಗದಿಗೊಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಇಂಧನ ವೇದಿಕೆ (ಐಇಎಫ್) ಸಮಾವೇಶದಲ್ಲಿ ಮಾತನಾಡಿದ ಮೋದಿ, ಎಲ್ಲರಿಗೂ ಇಂಧನದ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ದುಬಾರಿಯಾಗುತ್ತಿದೆ. ಸರ್ವರಿಗೂ ಕಡಿಮೆ ದರದಲ್ಲಿ ಇಂಧನ ಲಭಿಸಲು ಕೈಗೆಟುಕುವ ಬೆಲೆಯನ್ನು ನಿಗದಿಗೊಳಿಸಬೇಕು ಎಂದು ಸಮಾರಂಭದಲ್ಲಿ ಹಾಜರಿದ್ದ ಸೌದಿ ಅರೇಬಿಯಾದ ತೈಲ ಸಚಿವ ಖಲೀದ್ ಎ ಅಲ್ ಫಲಿಹಾ ಸೇರಿದಂತೆ ವಿಶ್ವದ ತೈಲ ಸಮೃದ್ಧ ರಾಷ್ಟ್ರಗಳ ಪ್ರತಿನಿಧಿಗಳಿಗೆ ಕರೆ ನೀಡಿದರು.
ತೈಲ ಮತ್ತು ಇಂಧನಗಳ ಕೃತಕ ಅಭಾವ ಸೃಷ್ಟಿಸಿ ಅವುಗಳ ಬೆಲೆಗಳನ್ನು ಏರಿಕೆ ಮಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇದು ಸ್ವಯಂ ವಿನಾಶಕ್ಕೆ ಕಾರಣವಾಗುತ್ತದೆ ಮೋದಿ ಹೇಳಿದರು.
ಸೂಕ್ತ ಮತ್ತು ಜವಾಬ್ದಾರಿಯುತ ಬೆಲೆಯನ್ನು ನಿಗದಿಗೊಳಿಸುವುದರಿಂದ ತೈಲ ಉತ್ಪಾದಕರಿಗೂ ಹಾಗೂ ಅವುಗಳನ್ನು ಬಳಸುವ ಬಳಕೆದಾರರಿಗೂ ಪ್ರಯೋಜನವಾಗುತ್ತದೆ. ಇದನ್ನು ಮನಗಂಡು ಸಾಧ್ಯವಾದಷ್ಟು ಕಡಿಮೆ ದರದ ಇಂಧನ ಪೂರೈಸಬೇಕೆಂದು ಅವರು ತೈಲ ದೊರೆಗಳಲ್ಲಿ ಮನವಿ ಮಾಡಿದರು.
ಪ್ರಸ್ತುತ ಸನ್ನಿವೇಶನದಲ್ಲಿ ಭಾರತಕ್ಕೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಕೈಗೆಟುಕುವ ದರದಲ್ಲಿ ಇಂಧನ ಪೂರೈಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತೈಲ ಶ್ರೀಮಂತ ರಾಷ್ಟ್ರಗಳು ಗಮನ ಹರಿಸಬೇಕೆಂದು ಸಲಹೆ ಮಾಡಿದರು.
ಸ್ವಚ್ಛ , ಕಡಿಮೆ ಬೆಲೆಯ ಹಾಗೂ ನಿರಂತರ ಪೂರೈಕೆಯ ಇಂಧನವು ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಮುಖ್ಯ. ಅನಿಲ ಮತ್ತು ತೈಲ ಬೆಲೆಯನ್ನು ಈ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ನಿಗದಿಗೊಳಿಸುವುದು ಕೂಡ ಅನಿವಾರ್ಯ ಎಂದು ಮೋದಿ ಕೆ ನೀಡಿದರು.
ಹಣದುಬ್ಬರ ಇಳಿಕೆಯೊಂದಿಗೆ ಭಾರತವು ಉತ್ತಮ ಬೆಳವಣಿಗೆ ದರವನ್ನು ಸಾಧಿಸಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಹೆಮ್ಮೆಯಿಂದ ಹೇಳಿಕೊಂಡರು.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಗಳ (ಒಇಸಿಡಿ) ಸದಸ್ಯೇತರ ರಾಷ್ಟ್ರಗಳು ಇಂಧನ ಬಳಕೆಯಲ್ಲಿ ಆಸಕ್ತಿ ತೋರಿದೆ. ಮುಂದಿನ 2 ರಿಂದ 5 ವರ್ಷಗಳ ಅವಧಿಯಲ್ಲಿ ಇಂಧನ ಬೇಡಿಕೆ ಸುಧಾರಣೆಯಲ್ಲಿ ಭಾರತ ಸಾಧನೆ ಮಾಡಲಿದೆ ಎಂದರು.