ಇಪ್ಪತ್ಮೂರು ದಿನಗಳ ಸಂಸತ್ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ಧೋರಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ:

ನವದೆಹಲಿ, ಏ.11- ಇಪ್ಪತ್ಮೂರು ದಿನಗಳ ಸಂಸತ್ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ಧೋರಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರೊಂದಿಗೆ ನಾಳೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಬಜೆಟ್ ಅಧಿವೇಶನ ಬಲಿಯಾಗಲು ಕಾಂಗ್ರೆಸ್ ಕಾರಣ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದ್ದು, ವಿರೋಧ ಪಕ್ಷಗಳ ನಡೆ ಖಂಡಿಸಿ ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಹುಬ್ಬಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಎಲ್ಲ ರಾಜ್ಯಗಳ ಬಿಜೆಪಿಯ ಸಂಸದರು ಈ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಅವರು ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರಾದರೂ, ಆಹಾರ ಸೇವಿಸುವುದಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ದೆಹಲಿಯಲ್ಲಿ ಸತ್ಯಾಗ್ರಹ ಕೈಗೊಂಡರೆ, ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಷಾ ಕರ್ನಾಟಕದಲ್ಲೇ ಸತ್ಯಾಗ್ರಹ ನಡೆಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮಾಜದ ಸಾಮರಸ್ಯದ ಹೆಸರಿನಲ್ಲಿ ರಾಜ್‍ಘಾಟ್‍ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಕಳೆದ ಮಾ.5ರಂದು ಆರಂಭವಾಗಿದ್ದ ಸಂಸತ್ ಕಲಾಪ ಒಂದೇ ಒಂದು ಮಸೂದೆಯನ್ನೂ ಅಂಗೀಕಾರ ಮಾಡಲಾಗದೆ ಕೇವಲ ಗದ್ದಲ, ಗೊಂದಲ, ಕೋಲಾಹಲದಲ್ಲೇ ಅಂತ್ಯಗೊಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ