ಬಿಜೆಪಿ ನಾಯಕರಿಗೆ ಕಗ್ಗಂಟಾದ ಬಂಡಾಯಗಾರರ ಮನವೊಲಿಕೆ

ಬೆಂಗಳೂರು,ಏ.10-ಟಿಕೆಟ್ ಸಿಗದೆ ಪ್ರಕಟಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ದ ತಿರುಗಿ ಬಿದ್ದಿರುವ ಬಂಡಾಯಗಾರರನ್ನು ಮನವೊಲಿಸಿ ಸಮಾಧಾನಪಡಿಸುವುದು ಬಿಜೆಪಿ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ತಾವು ಇಷ್ಟಪಟ್ಟ ಕ್ಷೇತ್ರದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೆ ಕಣಕ್ಕಿಳಿಯುವುದಾಗಿ ಬೆದರಿಕೆ ಹಾಕುತ್ತಿರುವುದರಿಂದ ಕಮಲ ನಾಯಕರು ದಿಕ್ಕು ತೋಚದಂತಾಗಿದ್ದಾರೆ.

ಕ್ಷಣ ಕ್ಷಣಕ್ಕೂ ಭಿನ್ನಮತದ ಕಾವು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ತುಸು ಬೆದರಿರುವ ರಾಜ್ಯ ಬಿಜೆಪಿ ನಾಯಕರು ಕಳೆದ ತಡರಾತ್ರಿವರೆಗೂ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ಅನಂತಕುಮಾರ್, ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರ ಪ್ರಮುಖರು ಸುದೀರ್ಘ ಚರ್ಚೆ ನಡೆಸಿದರು.

ಬಂಡಾಯ ಸಾರಿರುವ ಭಿನ್ನಮತೀಯರನ್ನು ಸಮಾಧಾನಪಡಿಸುವ ಜವಾಬಾರಿಯನ್ನು ಯಡಿಯೂರಪ್ಪ ಮತ್ತು ಅನಂತಕುಮಾರ್ ಹೆಗಲಿಗೆ ನೀಡಲಾಗಿದೆ.
ಯಾವ ಯಾವ ಕ್ಷೇತ್ರದಲ್ಲಿ ಅಸಮಾಧಾನಗೊಂಡಿದ್ದಾರೋ ಅಂತಹ ಕಡೆ ಕರೆದು ಮಾತುಕತೆ ನಡೆಸಬೇಕು. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಹಿರಿಯರಾದ ನೀವೇ ಮುರ್ತುವರ್ಜಿ ವಹಿಸಬೇಕೆಂದು ಸೂಚಿಸಿದ್ದಾರೆ.

ತಣ್ಣಗಾಗದ ಶಮನ:
ಆದರೆ ಟಿಕೆಟ್ ಸಿಗದೆ ಪಕ್ಷದ ನಾಯಕರ ವಿರುದ್ಧ ಕೊತ ಕೊತ ಕುದಿಯುತ್ತಿರುವ ಭಿನ್ನಮತೀಯರಿಗೆ ಸದ್ಯಕ್ಕೆ ಯಾರೊಬ್ಬರ ಮಾತು ಕೇಳುವ ವ್ಯವಧಾನದಲ್ಲಿಲ್ಲ. ಪಕ್ಷಕ್ಕಾಗಿ ದುಡಿದಿರುವ ನಮ್ಮನ್ನು ಕಡೆಗಣಿಸಿದರೆ ನಾವು ಯಾವ ಕಾರಣಕ್ಕಾಗಿ ಪಕ್ಷದಲ್ಲಿರಬೇಕೆಂದು ಮುಖಕ್ಕೆ ಹೊಡೆದಂತೆ ತಿರುಗೇಟು ನೀಡಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಎನ್.ಆರ್.ರಮೇಶ್, ಆರ್.ಆರ್.ನಗರದ ಆಕಾಂಕ್ಷಿಯಾಗಿದ್ದ ರಾಮಚಂದ್ರ, ಮೊಳಕಾಲ್ಮೂರಿನ ತಿಪ್ಪೇಸ್ವಾಮಿ, ಬೈಲಹೊಂಗಲದ ಜಗದೀಶ್ ಮೆಟಗುಡ್ಡ , ಮುದ್ದೇಬಿಹಾಳನ ಮಂಗಳ ಬಿರಾದಾರ್, ಬಿಜಾಪುರದ ಅಪ್ಪು ಪಟ್ಟಣ ಶೆಟ್ಟಿ ಸೇರಿದಂತೆ ಮತ್ತಿತರ ಜೊತೆ ಮಾತುಕತೆ ನಡೆಸಲು ಅನಂತಕುಮಾರ್ ಮತ್ತು ಯಡಿಯೂರಪ್ಪ ಮುಂದಾಗಿದ್ದಾರೆ.

ಇನ್ನು ಎರಡನೇ ಪಟ್ಟಿ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು , ಟಿಕೆಟ್ ವಂಚಿತರು ಮತ್ತೆ ಬಂಡಾಯ ಏಳದಂತೆ ಎಚ್ಚರಿಕೆ ವಹಿಸಬೇಕೆಂದು ಈಗಾಗಲೇ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ.

ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಇಲ್ಲವೆ ಜೆಡಿಎಸ್‍ನಿಂದ ಹೈಜಾಕ್ ಮಾಡಿ ಅಧಿಕೃತ ಅಭ್ಯರ್ಥಿಗಳ ವಿರುದ್ದವೇ ಕಣಕ್ಕಿಳಿಸುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಬೇಕೆಂದು ಸಲಹೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಲಿದೆಯೋ ಅಂತಹ ಆಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂಬ ಆಶ್ವಾಸನೆಯೊಂದಿಗೆ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ