ಬೆಂಗಳೂರು,ಏ.10-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿನಿಂದ ಮತದಾನ ಮುಗಿಯುವವರೆಗೂ ಹೆಲಿಕಾಪ್ಟರ್ನಲ್ಲೇ ರಾಜ್ಯ ಪ್ರವಾಸ ಮಾಡಲಿದ್ದಾರೆ.
ಇಂದು ಮೊದಲ ದಿನ ಕೊಪ್ಪಳ ಜಿಲ್ಲೆ, ಗಂಗಾವತಿ ಹಾಗೂ ಗದಗದ ಶಿರಾಹಟ್ಟಿಯಲ್ಲಿ ಉದ್ಯಮಿಗಳು ರೈತರ ಜೊತೆ ಸಂವಾದ ನಡೆಸಲಿದ್ದಾರೆ. ನಾಳೆಯಿಂದ ಯಡಿಯೂರಪ್ಪ ರಾಜ್ಯದುದ್ದಕ್ಕೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಹೆಲಿಕಾಪ್ಟರ್ ಬಳಕೆ ಮಾಡಲಿದ್ದಾರೆ.
ಖಾಸಗಿ ಕಂಪನಿಯಿಂದ ಬಾಡಿಗೆ ಪಡೆದಿರುವ ಈ ಹೆಲಿಕಾಪ್ಟರ್ನಲ್ಲಿ ಪೈಲೆಟ್ ಸೇರಿದಂತೆ ಒಟ್ಟು 6 ಮಂದಿ ಕುಳಿತುಕೊಳ್ಳಬಹುದು. ಬಿಜೆಪಿಯಲ್ಲಿ ಬಿಎಸ್ವೈ ತಾರಾ ಪ್ರಚಾರಕರಾಗಿರುವುದರಿಂದ ರಸ್ತೆಯಲ್ಲಿ ಹೋಗಿಬರಲು ಸಮಯದ ಅಭಾವ ಹಿನ್ನೆಲೆ ಕಾರಣ ಹೆಲಿಕಾಪ್ಟರ್ ಬಳಕೆ ಮಾಡಲಿದ್ದಾರೆ.
ಚುನಾವಣಾ ಬಹಿರಂಗ ಸಭೆ ಮುಕ್ತಾಯದವರೆಗೂ ಯಡಿಯೂರಪ್ಪ ಹೆಲಿಕಾಪ್ಟರ್ನಲ್ಲಿ ತೆರಳಿ ಪ್ರಚಾರ ನಡೆಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಒಂದು ವೇಳೆ ಅತಿಯಾಗಿ ಹೆಲಿಕಾಪ್ಟರ್ ಬಳಕೆ ಮಾಡಿದರೆ ಪ್ರತಿ ಪಕ್ಷಗಳು ಇದನ್ನೇ ಟೀಕೆ ಮಾಡಬಹುದೆಂಬ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಈ ರಕ್ಷಣಾತ್ಮಕ ತಂತ್ರ ಅನುಸರಿಸಿದ್ದಾರೆ.
ಇನ್ನು ಒಂದೊಂದು ಗಂಟೆಯೂ ಅಮೂಲ್ಯವಾಗಿರುವುದರಿಂದ ಸಾಮಾನ್ಯವಾಗಿ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳು ತಮ್ಮ ಪರ ಪ್ರಚಾರ ನಡೆಸುವಂತೆ ಬಿಎಸ್ವೈ ಅವರನ್ನು ಆಹ್ವಾನಿಸುವುದು ಸರ್ವೇ ಸಾಮಾನ್ಯವಾಗಿದೆ.
ದೂರದ ಸ್ಥಳಗಳಿಗೆ ಕಾರುಗಳಲ್ಲಿ ಹೋಗು ಬಂದರೆ ಸಮಯ ಹೆಚ್ಚು ತೆಗೆದುಕೊಳ್ಳುತ್ತಿರುವ ಕಾರಣ ಬಿಎಸ್ವೈ ಹೆಲಿಕಾಪ್ಟರ್ ಬಳಸಲು ಬಿಎಸ್ವೈ ತೀರ್ಮಾನ ಕೈಗೊಂಡಿದ್ದಾರೆ.