ಬೆಂಗಳೂರು, ಏ.9- ಪತ್ನಿ ಗ್ರಾಮದಲ್ಲಿ ವಾಸಿಸುತ್ತಿದ್ದಾಳೆ ಎಂಬ ಕಾರಣಕ್ಕೆ 25,000 ರೂ.ಗಳ ಮಧ್ಯಂತರ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳು ನೀಡಬೇಕಾಗಿಲ್ಲ ಎಂದು ಅರ್ಥವಲ್ಲ. ನಾಲ್ಕನೆ ವರ್ಗದ ನೌಕರರು ಕೂಡ ತಿಂಗಳಿಗೆ 25,000 ರೂ.ಗಳಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಪತ್ನಿಗೆ ತಿಂಗಳಿಗೆ ಆ ಮೊತ್ತವನ್ನು ನಿರ್ವಹಣೆ ವೆಚ್ಚ ನೀಡುವುದು ನ್ಯಾಯಯುತ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
32 ವರ್ಷದ ಉದ್ಯಮಿಯೊಬ್ಬರು ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿಗೆ ವಿರುದ್ಧವಾಗಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಫ್ಯಾಮಿಲಿ ಕೋರ್ಟ್, ಅವರ ಪತ್ನಿ ರಾಜಸ್ತಾನದ ಹನುಮಂರ್ಗನಲ್ಲಿ ವಾಸಿಸುತ್ತಿರುವ 32 ವರ್ಷದ ಪತ್ನಿ ವನಿತಾಗೆ ಕಾನೂನು ವ್ಯಾಜ್ಯ ವೆಚ್ಚ ಸೇರಿದಂತೆ ಮಧ್ಯಂತರ ನಿರ್ವಹಣೆ ವೆಚ್ಚ 25,000 ರೂ.ನೀಡಬೇಕೆಂದು ಆದೇಶ ನೀಡಿತ್ತು.
ತನ್ನ ಪತಿ ಉದ್ಯಮಿಯಾದರೂ ಕೂಡ ಅವರ ಆದಾಯದ ಬಗ್ಗೆ ಯಾವುದೇ ಸಾಕ್ಷಿಗಳನ್ನು ನೀಡಿರಲಿಲ್ಲ. ಮಧ್ಯಂತರ ನಿರ್ವಹಣೆ ವೆಚ್ಚ ತಿಂಗಳಿಗೆ 25,000 ರೂ. ನೀಡಬೇಕೆಂದು ಹೇಳಿ ಕೌಟುಂಬಿಕ ನ್ಯಾಯಾಲಯ ಉದ್ಯಮಿಗೆ ಅನ್ಯಾಯ ಮಾಡಿದೆ ಎಂದು ವಕೀಲ ಹೈಕೋರ್ಟ್ನಲ್ಲಿ ವಾದಿಸಿದ್ದರು.
ವನಿತಾ ಗ್ರಾಮದಲ್ಲಿ ವಾಸಿಸುತ್ತಿರುವುದರಿಂದ ತಿಂಗಳಿಗೆ ನಿರ್ವಹಣೆ ವೆಚ್ಚ 25,000 ರೂ. ಅಧಿಕವಾಗಿದೆ. ಹೀಗಾಗಿ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಬೇಕೆಂದು ಉದ್ಯಮಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಸಂದರ್ಭದಲ್ಲಿ ತನ್ನ ಪತಿಯಿಂದ ತಿಂಗಳಿಗೆ 75,000ರೂ. ನಿರ್ವಹಣೆ ವೆಚ್ಚ ಕೊಡಿಸಬೇಕೆಂದು ವನಿತಾ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನದ ನಂತರ ಮಹಿಳೆ ತನ್ನ ಜೀವನವನ್ನು ತಾನೇ ನಿರ್ವಹಿಸಬೇಕಾಗುತ್ತದೆ. ಉದ್ಯಮಿಯನ್ನು ಮದುವೆಯಾಗಿ ನಡೆಸಿದ ಜೀವನಶೈಲಿಗೆ ತಕ್ಕಂತೆ ಜೀವನ ಮಾಡಬೇಕೆಂಬ ಆಸೆ ಆಕೆಯಲ್ಲಿರುತ್ತದೆ. ಪತಿಗೆ ವಿಚ್ಛೇದನ ನೀಡಿದ್ದಾಳೆಂದ ಮಾತ್ರಕ್ಕೆ ಆಕೆಯ ಆತ್ಮಗೌರವ ಕಡಿಮೆಯಾಗುವುದಿಲ್ಲ. ಹೀಗಾಗಿ ಈ ನ್ಯಾಯಾಲಯವು ಅನ್ಯಾಯಕ್ಕೊಳಗಾದ ಕ್ರಮದಲ್ಲಿ ಯಾವುದೇ ಅಕ್ರಮ ಕಂಡು ಹಿಡಿಯುವುದಿಲ್ಲ. ಈ ಅರ್ಜಿ, ಯಾವುದೇ ಅರ್ಹತೆ ಇಲ್ಲದಿರುವುದರಿಂದ ಅದನ್ನು ವಜಾ ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.