ಹೈದರಾಬಾದ್, ಏ.9-ಭಾರತೀಯ ಚಿತ್ರರಂಗದಲ್ಲಿ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿದ ಬಾಹುಬಲಿ ಸಿನಿಮಾ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್ನ ಅಭಿಮಾನಿಗಳಿಗೆ ಹೊಸ ಸಿನಿಮಾಗಳಷ್ಟೇ ಅವರ ಮದುವೆ ಬಗ್ಗೆಯೂ ಭಾರೀ ಕುತೂಹಲ ಇದ್ದೇ ಇದೆ.
ಪ್ರಭಾಸ್, ತೆಲುಗು ನಟಿ ಹಾಗೂ ಮೆಗಾಸ್ಟಾರ್ ಚಿರಂಜೀವಿಯ ಸೋದರ ಸೊಸೆ (ನಟ-ನಿರ್ಮಾಪಕ ನಾಗೇಂದ್ರ ಬಾಬು ಪುತ್ರಿ) ನಿಹಾರಿಕಾ ಜೊತೆ ವಿವಾಹ ಆಗಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಹಬ್ಬಿದೆ. ಇದು ನಿಜವೇ? ಎಂಬ ಪ್ರಶ್ನೆಗಳು ಮೂಡಿವೆ.
ಆದರೆ, ಚಿರಂಜೀವಿ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇದೊಂದು ಆಧಾರರಹಿತ ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಬಾಹುಬಲಿ, ಬೆಡಗಿ ಅನುಷ್ಕಾ ಶೆಟ್ಟಿ(ದೇವಸೇನಾ) ಕೈಹಿಡಿಯಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಪ್ರಭಾಸ್ ಸೀಮೆಂಟ್ ಉದ್ಯಮಿ ಪುತ್ರಿಯನ್ನು ವಿವಾಹವಾಗಲಿದ್ದಾರೆ ಎಂಬ ಸಮಾಚಾರ ಹಬ್ಬಿತ್ತು. ಈಗ ನಿಹಾರಿಕಾ ಜೊತೆ ಮದುವೆಯ ಗಾಳಿ ಸುದ್ದಿ ಸೃಷ್ಟಿಯಾಗಿದೆ. ಒಟ್ಟಾರೆ ಪ್ರಭಾಸ್ ಯಾರನ್ನು ವರಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಲ್ಲದೇ ಚಿತ್ರರಂಗಕ್ಕೂ ಇದೆ.