ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು : ಸಾರ್ಕ್ ಶೃಂಗಸಭೆ ಮೇಲೆ ಅನಿಶ್ಚಿತತೆ ಕಾರ್ಮೋಡ

ನವದೆಹಲಿ, ಏ.8-ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣ ನೀಡಿರುವ ಭಾರತವು ಪ್ರಸ್ತುತ ಸನ್ನಿವೇಶದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಸಮ್ಮೇಳನ ನಡೆಸುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಸಾರ್ಕ್ ಶೃಂಗಸಭೆ ಮೇಲೆ ಅನಿಶ್ಚಿತತೆ ಕಾರ್ಮೋಡ ಕವಿದಿದೆ.
ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭದಲ್ಲಿ ಸಾರ್ಕ್ ಶೃಂಗಸಭೆ ಆಯೋಜನೆ ಕುರಿತ ವಿಷಯ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮೋದಿ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿದೆ. ಇಂಥ ಸನ್ನಿವೇಶದಲ್ಲಿ ಈ ಸಮ್ಮೇಳನ ನಡೆಸುವುದು ಅರ್ಥಹೀನ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಾರ್ಕ್ ಸಮ್ಮೇಳನ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಆಫ್ಘಾನಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ. ವರ್ಣಮಾಲೆಯ ಅಕ್ಷರಕ್ಕೆ ಅನುಕ್ರಮವಾಗಿ ಆಯಾ ದೇಶಗಳು ಶೃಂಗ ಸಭೆಯ ಆತಿಥ್ಯ ವಹಿಸಬೇಕಿದೆ. 2014ರಲ್ಲಿ ಹಿಮಾಲಯ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಮ್ಮೇಳನ ನಡೆದಿತ್ತು, ಪ್ರಧಾನಿ ಮೋದಿ ಭಾಗವಹಿಸಿದ್ದರು,
2016ರಲ್ಲಿ ಇಸ್ಲಾಮಾಬಾದ್ ಆತಿಥ್ಯ ವಹಿಸಬೇಕಿತ್ತು. ಆದರೆ, ಉರಿ ಪ್ರದೇಶದಲ್ಲಿ 19 ಯೋಧರನ್ನು ಬಲಿತೆಗೆದುಕೊಂಡ ಪಾಕ್ ಬೆಂಬಲಿತ ಉಗ್ರರ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ಭಾರತ ಸಭೆಯಿಂದ ದೂರ ಉಳಿದಿತ್ತು. ಬಾಂಗ್ಲಾದೇಶ, ಭೂತಾನ್ ಮತ್ತು ಆಫ್ಘಾನಿಸ್ತಾನ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿತ್ತು. ಇದರಿಂದಾಗಿ 2016ರ ಸಾರ್ಕ್ ಸಭೆ ರದ್ದಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ