ಬೆಂಗಳೂರು, ಏ.8- ಈ ಬಾರಿಯ ವಿಧಾನಸಭೆ ಚುನಾವಣೆ ನಾಗಪುರ ಸಿದ್ದಾಂತ ಮತ್ತು ಕರ್ನಾಟಕದ ಸೈದ್ದಾಂತಿಕ ನಿಲುವುಗಳ ಸಂಘರ್ಷವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಹೇಳಿದರು.
ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಬಿಜೆಪಿ, ನಾಗಪುರದ ಸಂದೇಶಗಳನ್ನು ಹೊತ್ತು ಇಲ್ಲಿ ಚುನಾವಣೆ ಎದುರಿಸುತ್ತದೆ. ದೇಶವನ್ನು ವಿಭಜನೆ ಮಾಡುವ ಕೆಲಸವನ್ನು ಮಾಡುತ್ತದೆ. ಆದರೆ ಕಾಂಗ್ರೆಸ್ ಪಕ್ಷ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮತ್ತು ಎಲ್ಲರನ್ನು ಒಳಗೊಳ್ಳುವಿಕೆಯ ಸಂದೇಶದೊಂದಿಗೆ ಚುನಾವಣೆಯನ್ನು ಎದುರಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಸಹಬಾಳ್ವೆಗೆ ಹೆಸರಾಗಿದೆ. ಹೊರಗಿನಿಂದ ಬಂದವರೂ ಕೂಡ ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ನೆಲೆಸಿದ್ದಾರೆ. ಕರ್ನಾಟಕ ರಾಜ್ಯ ವೈಚಾರಿಕತೆಯಲ್ಲಿ ವಿಶ್ವಮಾನ್ಯತೆ ಪಡೆದಿದೆ. ಬಸವಣ್ಣ, ಕನಕದಾಸರು ಮುಂತಾದ ದಾರ್ಶನಿಕರ ಸಂದೇಶಗಳು ಸೌಹಾರ್ದತೆಯನ್ನು ಸಾರುತ್ತದೆ. ಆದರೆ ಆರ್ಎಸ್ಎಸ್ ತದ್ವಿರುದ್ಧವಾಗಿ ದೇಶ ವಿಭಜನೆಯ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ನಮ್ಮ ಪಕ್ಷ ಎಲ್ಲರನ್ನೂ ಒಳಗೊಳ್ಳುವಿಕೆಯ ಪಕ್ಷವಾಗಿದೆ. ನಾನು ಸಂಚರಿಸುವ ಬಸ್ನಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ, ಮುನಿಯಪ್ಪ, ಮೊಯ್ಲಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಇದ್ದಾರೆ. ಆದರೆ ಮೋದಿ ಅವರ ಜೊತೆ ಯಾರೂ ಇಲ್ಲ. ಅವರು ಭಾಷಣ ಮಾಡುವಾಗ ವೇದಿಕೆಯಲ್ಲಿ ಸೀಮಿತವಾದ ವ್ಯಕ್ತಿಗಳಿರುತ್ತಾರೆ. ಮೋದಿ ಅವರದು ಏಕ ವ್ಯಕ್ತಿ ವೈಭವೀಕೃತ ಆಡಳಿತವಾಗಿದೆ. ಒಬ್ಬ ವ್ಯಕ್ತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಎಲ್ಲರ ಒಳಗೊಳ್ಳುವಿಕೆ ಮುಖ್ಯವಾಗಿದೆ ಎಂದು ರಾಹುಲ್ ತಿಳಿಸಿದರು.