ಬೆಂಗಳೂರು, ಏ.8-ಕಳೆದ ಅವಧಿಗಿಂತಲೂ ಈ ವರ್ಷದ ಚುನಾವಣೆ ಅತ್ಯಂತ ಕಠಿಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೊಂದಿಗೆ ಪತ್ರಕರ್ತರೊಂದಿಗೆ ಉಪಹಾರ ಕೂಟ ನಡೆಸಿದ ಅವರು,ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು.
2006ರ ಚಾಮುಂಡೇಶ್ವರಿ ಉಪಚುನಾವಣೆ ಮತ್ತು 2013ರ ವಿಧಾನಸಭೆ ಚುನಾವಣೆ ಅನುಭವಕ್ಕಿಂತಲೂ ಈ ಬಾರಿಯ ಚುನಾವಣೆ ಅತ್ಯಂತ ಕಠಿಣವಾಗಿದೆ. ಸಾಮಾಜಿಕ ಜಾಲತಾಣಗಳ ಜಾಗೃತಿ ಹೆಚ್ಚಾಗಿದ್ದು, ಜನರನ್ನು ಮನವೊಲಿಸುವುದು ಮೊದಲಿನಷ್ಟು ಸುಲಭವಲ್ಲ ಎಂದರು.
ಈ ಮೊದಲು ನನ್ನ ಕ್ಷೇತ್ರದಲ್ಲಿ ಒಂದು ಊರಿಗೆ ಭೇಟಿ ನೀಡಿ ನಾಲ್ಕೈದು ಪ್ರಮುಖ ಮುಖಂಡರನ್ನು ತೋರಿಸಿ ಮಾತನಾಡಿ ಮನವಿ ಮಾಡಿ ಬಂದಿದ್ದರೆ ಸಾಕಿತ್ತು, ಗೆಲ್ಲಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆಗಿಲ್ಲ. ಮನೆಯ ಯಜಮಾನನ್ನು ಮಾತನಾಡಿದ ಮೇಲೆ ಅವರ ಮಗನನ್ನು ಮಾತನಾಡಿಸಬೇಕು. ಅವರ ಕುಟುಂಬ ಇತರ ಸದಸ್ಯರನ್ನು ಭೇಟಿ ಮಾಡಬೇಕಿದೆ. ಜನರಲ್ಲಿ ಜಾಗೃತಿ ಹೆಚ್ಚಾದಷ್ಟು ಚುನಾವಣೆ ಕ್ಲಿಷ್ಟವಾಗುತ್ತಿದೆ ಎಂದು ಹೇಳಿದರು.
ಆದರೆ ಜನ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸುತ್ತಾರೆ. ಏನೇ ಅಪಪ್ರಚಾರ ಮಾಡಿದರೂ ಸತ್ಯವನ್ನು ವಿವೇಚಿಸುವ ಶಕ್ತಿ ಮತದಾರರಿಗಿದೆ. ಹೀಗಾಗಿ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುತ್ತಾರೆ. ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆಯಿಂದ ದೆಹಲಿಯಲ್ಲಿ ಸಭೆ:
ಕಾಂಗ್ರೆಸ್ ಟಿಕೆಟ್ ಹಂಚಿಕೆ ಸಂಬಂಧ ನಾಳೆಯಿಂದ ದೆಹಲಿಯಲ್ಲಿ ಮೂರು ದಿನಗಳ ಕಾಲ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಅದರಲ್ಲಿ ನಾವೆಲ್ಲ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.
ಕೆಲವು ಕ್ಷೇತ್ರಗಳಿಗೆ ಒಬ್ಬ ವ್ಯಕ್ತಿಯ ಹೆಸರಿದ್ದರೂ ಕೂಡ ರಾಜ್ಯ ಸಮಿತಿ ನೇರವಾಗಿ ಟಿಕೆಟ್ ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಸಮಿತಿಯ ಅಗತ್ಯವಿದೆ ಎಂದು ಹೇಳಿದರು.