ಬೆಂಗಳೂರು,ಏ.7- ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಸೋಮವಾರ ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ.
ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ಸುಮಾರು 80ರಿಂದ 100ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ಪಕ್ಷದ ಮುಖಂಡರು ತೀರ್ಮಾನಿಸಿದ್ದರೆ.
ನಾಳೆ ರಾತ್ರಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನವದೆಹಲಿಗೆ ತೆರಳಲಿದ್ದು , ಸೋಮವಾರ ಬೆಳಗ್ಗೆ ಸಂಸದೀಯ ಮುಖಂಡರ ಜೊತೆ ಚರ್ಚೆ ನಡೆಸುವರು.
ತದನಂತರ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು 140 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಬಿಜೆಪಿ ತೀರ್ಮಾನಿಸಿತ್ತು. ಆದರೆ ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಭಿನ್ನಮತ ಸೃಷ್ಟಿಯಾಗಬಹುದೆಂಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಈ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.
ಮೂಲಗಳ ಪ್ರಕಾರ ಮೊದಲ ಪಟ್ಟಿಯಲ್ಲಿ 80ರಿಂದ 100 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಇದರಲ್ಲಿ ಹಾಲಿ ಶಾಸಕರು ಹಾಗೂ ಅನ್ಯಪಕ್ಷದಿಂದ ಬಂದಿರುವ ಬೇರೆ ಬೇರೆ ಮುಖಂಡರಿಗೂ ಟಿಕೆಟ್ ದೊರಕಲಿದೆ.
ಉಳಿದಂತೆ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿರುವ ಸುಮಾರು 40ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.
ಉಳಿದ ಕ್ಷೇತ್ರಗಳಿಗೆ ಹಂತ ಹಂತವಾಗಿ ಪರಿಸ್ಥಿತಿ ನೋಡಿಕೊಂಡು ಪಟ್ಟಿಯನ್ನು ಬಿಡುಗಡೆ ಮಾಡಲು ಆರ್ಎಸ್ಎಸ್ ಸಲಹೆ ಮಾಡಿದೆ.
ಅಭಿಪ್ರಾಯ ಸಂಗ್ರಹಣೆ:
ಕಳೆದ ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸ್ಥಳೀಯ ನಾಯಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.
ಯಾವ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು, ಗೆಲ್ಲುವ ಕ್ಷೇತ್ರಗಳು ಯಾವು? ತೀವ್ರ ಪೈಪೆÇೀಟಿ ನೀಡಬಲ್ಲ ಕ್ಷೇತ್ರಗಳ ಬಗ್ಗೆ ತಮ್ಮದೇ ಆದ ವರದಿಯನ್ನು ಸಿದ್ದಪಡಿಸಿಕೊಂಡಿರುವ ರಾಮ್ಮಾಧವ್ ಇದನ್ನು ವರಿಷ್ಠರಿಗೆ ನೀಡಲಿದ್ದಾರೆ.
ಈ ವರದಿ ಆಧಾರದ ಮೇಲೆ ಪಟ್ಟಿ ಬಿಡುಗಡೆಯಾಗಲಿದೆ. ಅಲ್ಲದೆ ಖಾಸಗಿ ಸಂಸ್ಥೆಗಳಿಂದ ನಡೆಸಿರುವ ಸಮೀಕ್ಷೆ , ಜಿಲ್ಲಾ ಘಟಕಗಳು ನೀಡಿರುವ ವರದಿ, ರಾಜ್ಯ ಘಟಕದ ವರದಿ ಆಧಾರದ ಮೇಲೆ ಒಂದೊಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.
ಈ ಬಾರಿಯ ಅಭ್ಯರ್ಥಿಗಳ ಘೋಷಣೆಯಲ್ಲಿ ಯಾವುದೇ ಲಾಬಿ, ಒತ್ತಡಕ್ಕೆ ಒಳಗಾಗಿಲ್ಲ. ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಜಾತಿ, ಜನಬೆಂಬಲದ ಮಾನದಂಡದ ಮೇಲೆಯೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ.
ಸೋಮವಾರ ಬಿಡುಗಡೆಯಾಗಲಿರುವ ಪಟ್ಟಿಗೆ ಕಮಲ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ.