ಬೆಂಗಳೂರು, ಏ.7- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನಾಳೆ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಓಟ ಮತ್ತು ಚುನಾವಣೆ ಸಮಯ ಎಂಬ ಬೀದಿ ನಾಟಕ ಹಮ್ಮಿಕೊಂಡಿದೆ.
ಕಬ್ಬನ್ಪಾರ್ಕ್ ಮುಖ್ಯದ್ವಾರದಲ್ಲಿ ನಾಳೆ ಬೆಳಗ್ಗೆ ಮೈಸೂರು ರಮಾನಂದರ ಗೆಜ್ಜೆ-ಹೆಜ್ಜೆ ರಂಗತಂಡದವರು ಚುನಾವಣಾ ಸಮಯ ಎಂಬ ಬೀದಿ ನಾಟಕವಾಡುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಿದ್ದಾರೆ.
ನಂತರ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತದಾನ ಜಾಗೃತಿ ರಸ್ತೆ ಓಟ ಹಮ್ಮಿಕೊಳ್ಳಲಾಗಿದ್ದು, ನೂರಾರು ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಬ್ಬನ್ಪಾರ್ಕ್ ಮುಖ್ಯದ್ವಾರದಿಂದ ಕಸ್ತೂರ ಬಾ ರಸ್ತೆ, ಕಂಠೀರವ ಕ್ರೀಡಾಂಗಣದ ಬಲಭಾಗದ ರಸ್ತೆ ಮೂಲಕ ಮಲ್ಯ ಆಸ್ಪತ್ರೆ, ರಾಜಾರಾಂ ಮೋಹನ್ರಾಯ್ ರಸ್ತೆಗೆ ಆಗಮಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಹಕಾರ ಸಂಘದ ಬಳಿ ಓಟ ಕೊನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್, ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಅಪರ ಚುನಾವಣಾಧಿಕಾರಿ ಮನೋಜ್ ರಾಜನ್, ವಿಶೇಷ ಆಯುಕ್ತ ಮನೋಜ್ಕುಮಾರ್ ಮೀನ, ಬಿಬಿಎಂಪಿ ಅಧಿಕಾರಿಗಳಾದ ಎಂ.ವಿ.ಸಾವಿತ್ರಿ, ದಯಾನಂದ್, ಡಾ.ಟಿ.ಎಚ್.ವಿಶ್ವನಾಥ್, ಡಾ.ವಾಸಂತಿ ಅಮರ್ ಬಿ.ವಿ., ರವೀಂದ್ರ, ಟಿ.ಬಿ.ನಟೇಶ್ ಸೇರಿದಂತೆ ಎಂಟು ವಲಯಗಳ ಜಂಟಿ ಆಯುಕ್ತರುಗಳು, 27 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಪಾಲಿಕೆ ನೌಕರರು ಪಾಲ್ಗೊಳ್ಳಲಿದ್ದಾರೆ.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿರುವ ರಸ್ತೆ ಓಟ ಮತ್ತು ಚುನಾವಣಾ ಸಮಯ ಬೀದಿ ನಾಟಕ ಕಾರ್ಯಕ್ರಮದಲ್ಲಿ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಅಧಿಕಾರಿಗಳು ತಪ್ಪದೆ ಹಾಜರಾಗಬೇಕು ಎಂದು ಆಡಳಿತ ವಿಭಾಗದ ಉಪ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.