ಬೆಂಗಳೂರು, ಏ.7-ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಬ್ಯಾನರ್ ಮತ್ತು ಪೆÇೀಸ್ಟರ್ ಕಂಡುಬಂದರೆ ಅಲ್ಲಿನ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ.
ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರಚಾರದ ಸಂದರ್ಭದಲ್ಲಿ ಬಂಟಿಂಗ್ಸ್, ಬ್ಯಾನರ್ಸ್ ಬಳಸುವ ಕುರಿತಂತೆ ಕೆಲವು ಸೂಚನೆಗಳನ್ನು ನೀಡಿದ್ದು, ಎಲ್ಲ ಅಧಿಕಾರಿಗಳು ತಪ್ಪದೆ ಆಯೋಗದ ಆದೇಶವನ್ನು ಪಾಲಿಸಬೇಕು ಎಂದು ಮಂಜುನಾಥ್ ಪ್ರಸಾದ್ ಅವರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಸಾರ್ವಜನಿಕ ಆಸ್ತಿಪಾಸ್ತಿ ಮೇಲೆ ಚುನಾವಣೆಗೆ ಸಂಬಂಧಿಸಿದ ಗೋಡೆ ಬರಹ ಬರೆಯುವುದನ್ನು, ಪೆÇೀಸ್ಟರ್ ಅಂಟಿಸುವುದನ್ನು, ಜಾಹೀರಾತು ಫಲಕ ಪ್ರದರ್ಶಿಸುವುದನ್ನುಕಡ್ಡಾಯವಾಗಿ ನಿಷೇಧಿಸಲಾಗಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನುಮತಿ ಪಡೆದು ನಿರ್ದಿಷ್ಟ ಪ್ರಮಾಣದ ಭಿತ್ತಿಪತ್ರಗಳನ್ನು ಬಳಸಬಹುದು. ಈ ಕುರಿತಂತೆ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಚುನಾವಣಾ ಬ್ಯಾನರ್ ಬಳಸುವಂತಹ ವ್ಯಕ್ತಿಗಳು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಅನುಮತಿ ಪತ್ರ ಪಡೆಯಬೇಕು ಮತ್ತು ತಾವು ಪಡೆದ ಅನುಮತಿ ಪತ್ರದ ಫೆÇೀಟೋ ಕಾಪಿಯನ್ನು ಭಿತ್ತಿಪತ್ರಗಳ ಮೇಲೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಭಿತ್ತಿಪತ್ರ, ಬ್ಯಾನರ್ ಅಳವಡಿಸಲು ಪಾವತಿಸುವ ಹಣವನ್ನು ಆಯಾ ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸರಿದೂಗಿಸಲಾಗುವುದು.
ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಸಾರ್ವಜನಿಕ ಸಭೆ ನಡೆಯುವ ಸಂದರ್ಭದಲ್ಲಿ ಸಭೆ ಆರಂಭವಾಗುವ ಎರಡು ಗಂಟೆ ಮೊದಲು ಧ್ವಜ, ಬ್ಯಾನರ್, ಬಂಟಿಂಗ್ಸ್ಗಳನ್ನು ಹಾಕಬೇಕು ಹಾಗೂ ಕಾರ್ಯಕ್ರಮ ಮುಗಿದ ಒಂದು ಗಂಟೆಯೊಳಗೆ ಎಲ್ಲ ಭಿತ್ತಿಪತ್ರಗಳನ್ನು ತೆರವುಗೊಳಿಸಲೇಬೇಕಿದೆ.
ಒಂದು ವೇಳೆ ಆಯೋಗದ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಆಯೋಗದಿಂದ ಅನುಮತಿ ಪಡೆದ ವಾಹನಗಳ ಮೇಲೆ ಮಾತ್ರ ಆಯಾ ಪಕ್ಷಗಳ ಧ್ವಜ ಮತ್ತು ಬ್ಯಾನರ್ ಬಳಕೆ ಮಾಡಿಕೊಳ್ಳಬಹುದು. ಒಂದು ವೇಳೆ ಅನುಮತಿ ಪಡೆಯದ ವಾಹನಗಳ ಮೇಲೆ ರಾಜಕೀಯ ಪಕ್ಷಗಳ ಧ್ವಜ ಅಥವಾ ಬ್ಯಾನರ್ ಬಳಸಿದರೆ ಅದು ಕಾನೂನು ವಿರೋಧಿಸಿದಂತಾಗುತ್ತದೆ.
ಬಂಟಿಂಗ್ಸ್, ಬ್ಯಾನರ್, ಧ್ವಜ ಬಳಕೆ ವಿಚಾರದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಎಲ್ಲ ಚುನಾವಣಾಧಿಕಾರಿಗಳು ಚಾಚೂ ತಪ್ಪದೆ ಪಾಲಿಸಬೇಕು. ಯಾವುದೇ ರಾಜಕೀಯ ಪಕ್ಷಗಳ ಪರ ಕೆಲಸ ಮಾಡುವ ಅಥವಾ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.