ಬೆಂಗಳೂರು, ಏ.7- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡ ಅವರ ರಾಜೀನಾಮೆಯನ್ನು ಅಂಗೀಕರಿಸುವುದು ಸಮಂಜಸವಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.
ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ಸರ್ಕಾರಿ ನೌಕರ ಅಥವಾ ಅಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಕವಾಗಿಲ್ಲ ಎಂದು ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಲ್ಲಿ ಉಲ್ಲೇಖಿಸಲಾಗಿದೆ.
ಮಂಜೇಗೌಡ ಅವರು ನೀಡಿದ್ದ ರಾಜೀನಾಮೆ ಕುರಿತಂತೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಲಾಗಿತ್ತು. ಘೋಷಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ-ಪಾಸ್ತಿ ಹೊಂದಿರುವ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಲೋಕಾಯುಕ್ತ ಜಂಟಿ ಇಲಾಖೆ ವಿಚಾರಣೆ ಸಹ ಬಾಕಿ ಇದ್ದು, ಈ ಪ್ರಕರಣದಲ್ಲಿ ಕೆಎಟಿ ತಡೆಯಾಜ್ಞೆ ನೀಡಿದೆ. ಆದರೂ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರವೇ ಪ್ರಕರಣದಲ್ಲಿ ಸಾಕ್ಷಾಧಾರಗಳನ್ನು ಪರಿಶೀಲಿಸಿ ಅಭಿಯೋಜನ ಮಂಜೂರಾತಿಯನ್ನು ನೀಡಿದೆ.
ಬಳ್ಳಾರಿಯ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಮಂಜೇಗೌಡ ಅವರ ಭಾಗವಹಿಸುವಿಕೆ ಕುರಿತು ಇಲಾಖೆ ಜಂಟಿ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರವೇ ಲೋಕಾಯುಕ್ತರಿಗೆ ವಹಿಸಿರುವುದರಿಂದ ಈ ಹಂತದಲ್ಲಿ ರಾಜೀನಾಮೆ ಅಂಗೀಕರಿಸುವುದರಿಂದ ಲೋಕಾಯುಕ್ತಕ್ಕೆ ವಹಿಸಿರುವ ಜಂಟಿ ವಿಚಾರಣೆಯನ್ನು ಇತರೆ ಆರೋಪಿಗಳು ಸಂದರ್ಭದ ಲಾಭ ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಕಾನೂನು ಇಲಾಖೆ ಅಭಿಪ್ರಾಯದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಸರ್ಕಾರಿ ನೌಕರ ಅಥವಾ ಅಧಿಕಾರಿ ರಾಜೀನಾಮೆಯನ್ನು ಪರಿಗಣಿಸುವಾಗ ಸೇವೆಯಿಂದ ಅಮಾನತ್ತಿನಲ್ಲಿದ್ದರೆ ಮಾತ್ರ ಸರ್ಕಾರದ ಮಾರ್ಗಸೂಚಿಗಳಿವೆ. ಕ್ರಿಮಿನಲ್ ಪ್ರಕರಣ ಬಾಕಿ ಇರುವಾಗ ರಾಜೀನಾಮೆಯನ್ನು ಪರಿಗಣಿಸುವ ಕುರಿತು ಯಾವುದೇ ಸುತ್ತೋಲೆ ಅಥವಾ ನಿಯಮಗಳು ಜಾರಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಂಜೇಗೌಡ ಅವರು, ಹಿರಿಯ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ರಾಜೀನಾಮೆ ನೀಡಿ, ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ನಡೆಸಿದ್ದರು.