ಬೆಂಗಳೂರು, ಏ.7- ರಾಜ್ಯವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸೇವಾಕೇಂದ್ರವನ್ನು ಈ ಬಾರಿ ಭಾರತದ ಚುನಾವಣಾ ಆಯೋಗವೇ ವ್ಯವಸ್ಥೆ ಮಾಡಲಿದೆ.
ಮತದಾರರಿಗೆ ಅನುಕೂಲವಾಗುವಂತೆ ಸೇವಾ ಕೇಂದ್ರವನ್ನು ತೆರೆಯಲಿದ್ದು, ಮತದಾರರು ತಮ್ಮ ಸಂದೇಹಗಳನ್ನು ಈ ಕೇಂದ್ರದ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಅಲ್ಲದೆ, ಮತದಾನ ನಡೆಯುವ ಒಂದು ವಾರ ಮುಂಚಿತವಾಗಿ ಮತದಾರರಿಗೆ ಮತದಾರರ ಚೀಟಿಯನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.
ಮತದಾನ ಮಾಡಲು ಅನುಕೂಲವಾಗುವಂತೆ ವಿಕಲಚೇತನರಿಗೆ ಗಾಲಿ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಮತದಾರರಿಗೆ ತಮ್ಮ ತಮ್ಮ ಮತಗಟ್ಟೆಗಳನ್ನು ಗುರುತಿಸಲು ಅನುಕೂಲವಾಗುವಂತೆ ಎಸ್ಎಂಎಸ್ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ.
ಮಾಹಿತಿ ತಂತ್ರಜ್ಞಾನವನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲು ಆಯೋಗ ಮುಂದಾಗಿದ್ದು, ಕುಂದು-ಕೊರತೆ ನಿವಾರಣೆಗಾಗಿ ಸಮಾಧಾನ್ ಎಂಬ ಹೆಸರಿನಲ್ಲಿ ಏಕಗವಾಕ್ಷಿ ಪರವಾನಗಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.
ಸುಗಮ್ ಹೆಸರಿನಲ್ಲಿ ವಾಹನ ನಿರ್ವಹಣಾ ವ್ಯವಸ್ಥೆ ಬಳಸಲಾಗುತ್ತಿದೆ. ರಾಜ್ಯದ ಚೆಕ್ಪೆÇೀಸ್ಟ್ಗಳು, ಮತ ಎಣಿಕೆ ಕೇಂದ್ರಗಳು ಹಾಗೂ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಮುಂದಾಗಿದೆ.
ಚುನಾವಣಾ ವೆಚ್ಚ ಪರಿಶೀಲನೆ ಮತ್ತು ನೀತಿ ಸಂಹಿತೆ ಪಾಲನೆಗೆ ಸಂಬಂಧಿಸಿದಂತೆ 1344 ಸಂಚಾರಿ ತಂಡಗಳು, 1255 ಸ್ನಾಟಿಕ್ ಸರ್ವೆಲೆನ್ಸ್ ತಂಡಗಳನ್ನು ಆಯೋಗ ರಚಿಸಿದೆ.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 58,546 ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳ ಜೊತೆಗೆ ವಿವಿ ಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ. ಅಲ್ಲದೆ, ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಲು ಕೂಡ ಕ್ರಮ ಕೈಗೊಳ್ಳುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.