ಮೈಸೂರು, ಏ.6- ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಲಿಸುವ ತಾಕತ್ತು ನಮಗೂ ಇದೆ. ಅವರನ್ನು ಸೋಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ದೇವೇಗೌಡರು, ಕುಮಾರಸ್ವಾಮಿ ಮತ್ತು ಬಿಎಸ್ವೈ ಪ್ರಯತ್ನ ಪಟ್ಟಿದ್ದರು. ಆದರೆ, ಅದು ಫಲಿಸಲಿಲ್ಲ. ಈಗಲೂ ಫಲಿಸುವುದಿಲ್ಲ. ಈಗ ನಡೆಯುವ ಚುನಾವಣೆಯಲ್ಲಿ ಅವರನ್ನು ಸೋಲಿಸುವ ತಾಕತ್ತು ನಮಗೂ ಇದೆ. ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ ಒಂದು ದಿನ ನಾನು ಪ್ರಚಾರ ಮಾಡಿದರೆ ಸಾಕು, ಅವರನ್ನು ಸೋಲಿಸಬಹುದು ಎಂದು ಹೇಳಿದರು.
ನಾನು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ. ನನ್ನ ಸ್ಪರ್ಧೆ ಏನಿದ್ದರೂ ಚಾಮುಂಡೇಶ್ವರಿ ಕ್ಷೇತ್ರಕ್ಕೇ ಸೀಮಿತ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಕೇವಲ ಊಹಾಪೆÇೀಹ. ನಾನು ಇಲ್ಲಿಯೇ ಸ್ಪರ್ಧಿಸುತ್ತೇನೆ. ಇದೇ ಕ್ಷೇತ್ರದಲ್ಲೇ ಗೆಲ್ಲುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹಣ ಹಂಚುತ್ತಿದ್ದು, ವಿನಾಕಾರಣ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಶ್ರೀನಿವಾಸ ಪ್ರಸಾದ್ ಹಾಗೂ ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಅವರು ನನ್ನನ್ನು ಗೆಲ್ಲಿಸುವವರಲ್ಲ, ನನ್ನನ್ನು ಗೆಲ್ಲಿಸುವುದು ಕ್ಷೇತ್ರದ ಜನತೆ. ಇಲ್ಲಿನ ಜನರ ಮೇಲೆ ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಸೇರ್ಪಡೆ: ಇದೇ ಮುಖ್ಯಮಂತ್ರಿ ನಿವಾಸಕ್ಕೆ ವರುಣಾ, ದಂಡಿಕೆರೆ, ಪಿಳ್ಳೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಆಗಮಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸಿದ್ದರಾಮಯ್ಯರಿಂದ ಮತಬೇಟೆ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೂಡ ಭರ್ಜರಿ ಪ್ರಚಾರ ನಡೆಸಿದರು.
ಕಳೆದ ವಾರ ಐದು ದಿನಗಳ ಕಾಲ ಇಲ್ಲೇ ವಾಸ್ತವ್ಯ ಹೂಡಿ 22 ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಇಂದು ಒಕ್ಕಲಿಗರ ಪ್ರಭಾವವಿರುವ ಗ್ರಾಮಗಳಿಗೆ ಭೇಟಿ ನೀಡಿ ಮತಬೇಟೆ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತ ಉಮೇಶ್ ಅವರ ಮನೆಯಲ್ಲಿ ಉಪಹಾರ ಸೇವಿಸಿ ಕೆಲವು ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಆಶೀರ್ವಚನ ಪಡೆದು ಅವರೊಂದಿಗೂ ಕೂಡ ಮಾತುಕತೆ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಕೂಡ ಒಕ್ಕಲಿಗ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಉಲ್ಲಾಳ, ಹೊಸಕೋಟೆ ಗ್ರಾಮಗಳಿಗೆ ತೆರಳಿ ಮತಪ್ರಚಾರ ನಡೆಸಿದರು.