(ಪಶ್ಚಿಮ ಬಂಗಾಳ) : ನಾನು ಈ ರಾಜ್ಯದ ಮಗ. ನನ್ನ ರಾಜ್ಯದ ಜನರಿಗಾಗಿ ನಾನು ನನ್ನ ಕರ್ತವ್ಯವನ್ನು ಮುಂದುವರೆಸುತ್ತೇನೆ ಎಂದು ಟಿಎಂಸಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪೂರ್ವ ಮಿಡ್ನಾ ಪೊರ್ ಜಿಲ್ಲೆಯ ತಮ್ಲುಕ್ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರ ಜನ್ಮ ದಿನದ ನಿಮಿತ್ತ ಜಾಥಾ ನಡೆಯಿತು. ಈ ವೇಳೆ, ನಿಮ್ಮ ಮುಂದಿನ ರಾಜಕೀಯ ನಡೆ ಏನಾಗಿರುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಟಿಎಂಸಿ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿ ಸಂಧಾನ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಸುಳ್ಳು. ನಾನು ಪಶ್ಚಿಮ ಬಂಗಾಳ ರಾಜ್ಯದ ಮಗ. ಈ ರಾಜ್ಯದ ಜನರ ಸೇವೆಗಾಗಿ ನಾನು ಸದಾ ಸಿದ್ಧ ಎನ್ನುವ ಮೂಲಕ ತಮ್ಮ ಮುನಿಸು ಮುಂದುವರೆಸಿದ್ದಾರೆ.
ಅವರ ಮತ್ತು ಪಕ್ಷದ ನಡುವಿನ ಸಂಧಾನದ ಬಿಕ್ಕಟ್ಟಿನ ನಂತರವೂ ಅಂತರ ಕಾಯ್ದುಕೊಂಡು ಬಂದಿರುವ ಅಧಿಕಾರಿ, ಇಂದು ಸಹ ಸ್ವತಂತ್ರ ವ್ಯಕ್ತಿಯಾಗಿ ಜಾಥಾ ನಡೆಸಿದರು. ಈ ವೇಳೆ, ಅವರ ಕಾರ್ಯಕರ್ತರು ಟಿಎಂಸಿ ಪಕ್ಷದ ಬಾವುಟ ಪಕ್ಕಕ್ಕಿಟ್ಟು ರಾಷ್ಟ್ರಧ್ವಜವನ್ನು ಹಿಡಿದು ಓಡಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವುದು ನಮ್ಮ ಸಂವಿಧಾನದ ಮೂಲ ಮಂತ್ರ. ಅದರಂತೆಯೇ ನಾನು ಸಹ. ಹಾಗಾಗಿ ಓರ್ವ ಭಾರತೀಯ ಪುತ್ರನಾಗಿ, ಬಂಗಾಳದ ಮಗನಾಗಿ ನಾನು ನನ್ನ ಸೇವೆಯನ್ನು ಮುಂದುವರೆಸುತ್ತೇನೆ. ನನ್ನ ಹೋರಾಟ ಇಷ್ಟಕ್ಕೆ ನಿಲ್ಲದು ಎಂದು ಗುಡುಗಿದ್ದಾರೆ.
ಟಿಎಂಸಿ ನಾಯಕರು ಸುವೇಂದು ಅಧಿಕಾರಿ ಅವರ ಬೇಡಿಕೆಯನ್ನು ಈಡೇರಿಸದಿದ್ದರಿಂದ ಇವರಿಬ್ಬರ ನಡುವಿನ ಸಂಧಾನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಸುವೇಂದು ಅಧಿಕಾರಿ ಟಿಎಂಸಿ ಪಕ್ಷದ ಓರ್ವ ಪ್ರಭಾವಿ ನಾಯಕರಾಗಿದ್ದರು. ಆದರೆ, ಪಕ್ಷದ ಆಂತರಿಕ ಕಚ್ಚಾಟದಿಂದ ಬೇಸತ್ತು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಯಾಬಿನೆಟ್ ಸೇರಿದಂತೆ ಇತರ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.