ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಕಸರತ್ತು ಅಂತ್ಯಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಶುರುವಾಗಲಿದ್ದು, ಮತದಾನಕ್ಕೆ ಅಗತ್ಯ ತಯಾರಿಯನ್ನೂ ಚುನಾವಣೆ ಆಯೋಗ ಮಾಡಿಟ್ಟುಕೊಂಡು ಪ್ರಜಾತಂತ್ರದ ಉಪಪರ್ವಕ್ಕೆ ಕಾಯುತ್ತಿದೆ. ಈಗಾಗಲೇ ಅಗತ್ಯ ಸಿಬ್ಬಂದಿಯನ್ನೂ ಮತಗಟ್ಟೆಗಳಿಗೆ ನಿಯುಕ್ತಿಗೊಳಿಸಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲೇ 80 ವರ್ಷಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು, ವಿಶಿಷ್ಟಚೇತನ ಮತದಾರರ ಮನೆಗೇ ತೆರಳಿ ಬ್ಯಾಲೆಟ್ ಶೀಟ್ ಮೂಲಕ ಮತದಾನ ಮಾಡಿಸಿಕೊಳ್ಳಲಾಗಿದೆ. ಈ ಮತಗಳು ಮತಪೆಟ್ಟಿಗೆಯಲ್ಲಿ ಭದ್ರವಾಗಿವೆ. ಇನ್ನೇನಿದ್ದರೂ ಉಳಿದ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕಿದ್ದು, ಕೊರೋನಾ ಸೋಂಕಿತರಿಗಾಗಿ ಕೊನೆಯ ಒಂದು ಗಂಟೆಗಳ ಅವಯನ್ನು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿಷ್ಠೆಯ ಉಪ ಕದನ
ವಿಧಾನಸಭೆಯ ಬಲಾಬಲದಲ್ಲಿ ಸಣ್ಣ ವ್ಯತ್ಯವಾಗುವುದು ಬಿಟ್ಟರೆ ಮತ್ತಾವ ಭಾರೀ ಬದಲಾವಣೆ ಆಗದಿದ್ದರೂ ಸಾರ್ವತ್ರಿಕ ಚುನಾವಣೆಯಷ್ಟೇ ಪ್ರತಿಷ್ಠೆಯ ಕಣವಾಗಿರುವ ಈ ಉಪಚುನಾವಣೆ ನಿರ್ಣಾಯಕ ಘಟಕ್ಕೆ ಬಂದು ನಿಂತಿದೆ. ಇಷ್ಟು ದಿನ ಅಬ್ಬರದ ಪ್ರಚಾರ ನಡೆಸಿದ ರಾಜಕೀಯ ನಾಯಕರು, ವಿರೋಗಳ ಮೇಲೆ ಆರೋಪ-ಪ್ರತ್ಯಾರೋಪ ಹೊರಸಿದ್ದೂ ಅಲ್ಲದೆ, ತಮ್ಮ ಅಭ್ಯರ್ಥಿಗಳೇ ಉತ್ತಮರು ಎಂದು ಬಿಂಬಿಸುವ ಮೂಲಕ ಮತಭಿಕ್ಷೆ ಕೇಳಿದ್ದಾಗಿದೆ. ಕೊನೆಯ ಕ್ಷಣದಲ್ಲಿ ಮನೆ-ಮನೆಗೆ ತೆರಳಿ ಮನವೊಲಿಸುವ ಕಾರ್ಯವೂ ನಡೆದಿದೆ. ಚುನಾವಣಾ ಭ್ರಷ್ಟಾಚಾರದ ಆರೋಪಗಳನ್ನೂ ಹೊರಿಸಿದ್ದಾಗಿದೆ. ಇನ್ನೇನಿದ್ದರೂ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯುವುದೊಂದೇ ಬಾಕಿ ಇರುವುದು.
ಅಭ್ಯರ್ಥಿಗಳ ಎದೆಬಡಿತ ಹೆಚ್ಚಳ
ಜೆಡಿಎಸ್ನ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದಲ್ಲಿ ಪತ್ನಿ ಅಮ್ಮಾಜಮ್ಮಗೇ ಪಕ್ಷ ಟಿಕೆಟ್ ನೀಡಿದ್ದು, ಜೆಡಿಎಸ್ನಿಂದ ಬೇಸತ್ತು ಬಿಜೆಪಿ ಸೇರಿದ ರಾಜೇಶ್ಗೌಡ ಕಮಲ ಪಾಳಯದ ಕಟ್ಟಾಳಾಗಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಎಂದಿನಂತೆ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದು, ಮೂವರಿಗೂ ಇದು ಸತ್ವಪರೀಕ್ಷೆಯಾಗಿದೆ.
ಅಂತೆಯೇ ರಾಜರಾಜೇಶ್ವರಿನಗರದಲ್ಲಿ ಕೈ ಬಿಟ್ಟು ಕಮಲ ಹಿಡಿದಿರುವ ಮುನಿರತ್ನ ಪಕ್ಷ ಬದಲಿಸಿ ಅಗ್ನಿಪರೀಕ್ಷೆಗೆ ಒಡ್ಡಿಕೊಂಡಿದ್ದು, ಕಾಂಗ್ರೆಸ್ನಿಂದ ಎಚ್.ಕುಸುಮಾ ಸ್ಪರ್ಧೆಗಿಳಿದಿದ್ದಾರೆ. ಇನ್ನು ಜೆಡಿಎಸ್ನಿಂದ ವಿ.ಕೃಷ್ಣಮೂರ್ತಿ ಅವರು ಪಕ್ಷದ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.
ಇಷ್ಟು ದಿನ ನಡೆಸಿದ ಪ್ರಚಾರದ ಕಸರತ್ತು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ? ಮತದಾರರ ಮನಮುಟ್ಟುವಲ್ಲಿ ಎಷ್ಟು ಸಫಲರಾಗಿದ್ದೇವೆ ? ಎಲ್ಲವೂ ತಮ್ಮ ಪರವಾದ ಮತಗಳಾಗಿ ಪರವರ್ತನೆಗೊಳ್ಳಲಿವೆಯೇ ಎಂಬ ಎದೆಬಡಿತ ಹೆಚ್ಚಾಗಿದ್ದು, ಮತ ಎಣಿಕೆಯ ದಿನ ಇರಬಹುದಾದ ಆತಂಕ, ಕುತೂಹಲ ಈಗಲೇ ಜಾಸ್ತಿಯಾಗಿದೆ.