ನವದೆಹಲಿ ; ದೇಶದಲ್ಲಿ ಕೊರೋನಾ ವೈರಸ್ ಹರಡಿದ ನಂತರ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ನಡೆಯುತ್ತಿರುವ ವಿಡಿಯೋ ಕಾನ್ಫರೆನ್ಸ್ನಲ್ಲಿ ಮೇ.03 ರ ನಂತರ ದೇಶದಲ್ಲಿ ಲಾಕ್ಡೌನ್ ಮುಂದುವರೆಸಬೇಕೆ? ಬೇಡವೇ? ಅಥವಾ ಹಂತ ಹಂತವಾಗಿ ಲಾಕ್ಡೌನ್ ಅನ್ನು ತೆರವುಗೊಳಿಸಬೇಕೆ? ಎಂದು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಕ್ಡೌನ್ ನಿಂದಾಗಿ ದೇಶದ ಹಲವಾರು ಕ್ಷೇತ್ರಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಆರ್ಥಿಕ ಚಟುವಟಿಕೆಗಳು ನಡೆಯದೇ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಕೆಲವು ರಾಜ್ಯಗಳು ಕೊರೋನಾ ಹತೋಟಿಗೆ ಬರುವವರೆಗೆ ಲಾಕ್ಡೌನ್ ಮುಂದುವರೆಯಬೇಕು ಎಂದು ಒತ್ತಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ತಡರಾತ್ರಿ ದಿಢೀರ್ ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ ಪುರಸಭೆ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿತ್ತು. ಅಲ್ಲದೆ, ಭಾನುವಾರ ರೇಡಿಯೋ ಮೂಲಕ ಮನ್ ಕಿ ಬಾತ್ನಲ್ಲಿ ಸಂದೇಶ ನೀಡಿದ್ದ ಪ್ರಧಾನಿ ಮೋದಿ, “ಕೊರೋನಾ ವಿರುದ್ಧ ಜನ ಎಚ್ಚರಿಕೆಯಿಂದ ಮುಂದುವರೆಯಬೇಕು. ಮುನ್ನೆಚ್ಚರಿಕೆ ವಹಿಸಬೇಕು” ಎಂದು ಸಲಹೆ ನೀಡಿದ್ದರು.
ಈ ನಿಟ್ಟಿನಲ್ಲಿ ಇಂದಿನ ವಿಡಿಯೋ ಕಾನ್ಫರೆನ್ಸ್ ಸಾಕಷ್ಟು ಮಹತ್ವ ಪಡೆದಿದ್ದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀ ರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ಪಾಲ್ಗೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ ನಿರ್ಧಾರ ಏನಾಗಿರಲಿದೆ ಎಂದು ತಿಳಿದುಕೊಳ್ಳಲು ಕಾಯಲೇಬೇಕಿದೆ.