ಹೊಸದಿಲ್ಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ಮಹತ್ವದ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ 14.5 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಇನ್ನು ತಮಿಳುನಾಡಿಗೆ 4.75 ಟಿಎಂಸಿ ನೀರನ್ನು ಕಡಿತ ಮಾಡಿದೆ.
ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡುಗಡೆಗೆ ಆದೇಶ ನೀಡದೆ. ಪ್ರಸ್ತುತ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಇದರ ಪ್ರಮಾಣದಲ್ಲಿ ಸುಪ್ರೀಂ ಕೋರ್ಟ್ ಕಡಿಮೆ ಮಾಡಿದೆ.
ಅಂತೆಯೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವ ಕೆಲಸ ಕೇಂದ್ರ ಸರ್ಕಾರದ್ದು ಎಂದೂ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ಆ ಮೂಲಕ ಕರ್ನಾಟಕದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಭಾಗಶಃ ಒಪ್ಪಿಕೊಂಡಿದೆ. ಇದೇ ವೇಳೆ 1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದು ಹೇಳಿದೆ.
ಇನ್ನು ಕರ್ನಾಟಕಕ್ಕೆ ಹೆಚ್ಚುವರಿ ನೀರು ಲಭ್ಯವಾದ ಹಿನ್ನೆಲೆ ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆ ಮಾಡಿಕೊಳ್ಳಬಹುದು ಎಂದು ಸುಪ್ರೀಂ ತಿಳಿಸಿದೆ. ಇದೇ ವೇಳೆ ಬೆಂಗಳೂರಿಗೆ 4.75 ನೀರನ್ನು ಬಿಡುಗಡೆಗೆ ಸೂಚನೆ ನೀಡಿದೆ.
ಕಾವೇರಿ ನ್ಯಾಯಾಧೀಕರಣದ ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಈ ವಿಶೇಷ ಮೇಲ್ಮನವಿಯ ವಿಚಾರಣೆಯನ್ನು 2016ರ ಅಕ್ಟೋಬರ್ ರಿಂದ ಆರಂಭಿಸಿದ ಸುಪ್ರೀಂ ನ್ಯಾಯಪೀಠ 2017ರ ಸೆಪ್ಟೆಂಬರ್ ನಲ್ಲಿ ವಿಚಾರಣೆ ಪೂರ್ಣಗೊಳಿಸಿತ್ತು.
ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ರಚಿಸಲಾಗಿತ್ತು.