ಬೆಂಗಳೂರು, ಏ.6- ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಯೋಧರಂತೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳಿಗೆ ಅವಶ್ಯವಾಗಿರುವ ಪಿಪಿಇ ಕಿಟ್ಗಳ ತಯಾರಿಕೆಯಲ್ಲಿ ಚಿಕ್ಕಬಾಣವಾರದ ಡಿಸ್ಪೋ ಕಾನ್ಸೆಪ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರತವಾಗಿದೆ.
ಕಳೆದ ಮೂರುವರೆ ವರ್ಷಗಳಿಂದ ಸರ್ಜಿಕಲ್ ಉಪಕರಣಗಳನ್ನು ಸಿದ್ದಪಡಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದ ಈ ಕಂಪನಿ ಈಗ ವೈದ್ಯರು , ನರ್ಸ್ಗಳು ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಪಿಪಿಇ ಕಿಟ್ ತಯಾರಿಕೆಯಲ್ಲಿ ನಿರತವಾಗಿದೆ.
ಡಿಸ್ಪೋ ಕಾನ್ಸೆಪ್ಟ್ ಪ್ರೈವೇಟೆಡ್ ಲಿಮಿಟೆಡ್ ವೈದ್ಯಕೀಯ ಸಾಮಾಗ್ರಿ ತಯಾರಿಕೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಕೊರೊನಾ ಸೋಂಕಿತರು, ಶಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು , ನರ್ಸ್ಗಳಿಗೆ ಅಗತ್ಯವಾಗಿರುವ ಐಎಸ್ಒ ದೃಢೀಕೃತ ತ್ರಿ ಲೇಯರ್ರ್ಸ್ ರಕ್ಷಣಾ ಕವಚಗಳನ್ನು ತಯಾರಿಸುತ್ತಿದೆ.
ಇದಕ್ಕೆ ಅಗತ್ಯವಾದ ಕಚ್ಚಾ ಸಾಮಾಗ್ರಿಗಳನ್ನು ದೆಹಲಿ, ಮುಂಬೈ, ಅಹಮಾದಾಬಾದ್ನಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಕಂಪನಿಯ ಮುಖ್ಯಸ್ಥರಾದ ಪ್ರವೀಣ್ ಅವರು ತಿಳಿಸಿದ್ದಾರೆ.
ಕೊರೊನಾ ಪಿಡುಗನ್ನು ತೊಲಗಿಸಲು ವಿಶ್ವವೇ ಟೊಂಕ ಕಟ್ಟಿ ನಿಂತಿದೆ. ಇದಕ್ಕೆ ಇನ್ನು ಔಷಧವನ್ನುಕಂಡುಹಿಡಿಯಲು ಸಾಧ್ಯವಾಗಿಲ್ಲ. ಇದನ್ನು ನಿಯಂತ್ರಿಸಲು ಹರಸಾಹಸ ಮಾಡಲಾಗುತ್ತಿದೆ. ವೈದ್ಯರು, ನರ್ಸ್ಗಳು, ವೈದ್ಯಕೀಯ ಸಿಬ್ಬಂದಿ ರೋಗ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ರೋಗಿಯಿಂದ ವೈದ್ಯರಿಗೆ ರೋಗ ಹರಡದಂತೆ ರಕ್ಷಣಾ ಕವಚಗಳನ್ನು(ಪಿಪಿಇ ಕಿಟ್) ತಯಾರು ಮಾಡಲಾಗುತ್ತಿದೆ. ನಮ್ಮ ಕಂಪನಿಯಿಂದ ಆರಂಭದಲ್ಲಿ ಪ್ರತಿದಿನ ಎರಡೂವರೆಸಾವಿರ ಕಿಟ್ಗಳನ್ನು ತಯಾರು ಮಾಡಲಾಗುತ್ತಿತ್ತು. ಈಗ ಪ್ರತಿದಿನ 10 ಸಾವಿರ ಕಿಟ್ಗಳಿಗೆ ಬೇಡಿಕೆ ಬರಲಾರಂಭಿಸಿದೆ.
ತಮಿಳುನಾಡು, ಒರಿಸ್ಸಾ ನಮ್ಮ ರಾಜ್ಯದ ಬಿಜಾಪುರ, ಕಲಬುರಗಿ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಕಿಟ್ಗಳ ಬೇಡಿಕೆ ಬಂದಿದೆ. ಬೇಡಿಕೆಗನುಗುಣವಾಗಿ ಪೂರೈಕೆ ಮಾಡುತ್ತಿದ್ದೇವೆ. ಅಗತ್ಯವಾದ ಕಚ್ಚಾ ಸಾಮಾಗ್ರಿಗಳನ್ನು ತರಿಸಿಕೊಳ್ಳಲು ನಮಗೆ ಪೋಲೀಸರ ಸಹಕಾರ ಸಿಕ್ಕಿದೆ ಎಂದು ಪ್ರವೀಣ್ ತಿಳಿಸಿದರು.
ರೋಗ ನಿಯಂತ್ರಣಗೊಳ್ಳಬೇಕು, ಮನುಕುಲಕ್ಕೆ ಮಾರಕವಾಗಿರುವ ಕೊರೊನಾದಿಂದ ನಾವು ಮುಕ್ತರಾಗಬೇಕು. ಇದೇ ಸಂದರ್ಭದಲ್ಲಿ ನಮಗೆ ಬಂದಿರುವ ಈ ಅವಕಾಶವನ್ನು ನಾವು ಸೇವಾ ಮನೋಭಾವದಿಂದ ಮಾಡುತ್ತಿದ್ದೇವೆ. ಅಲ್ಲದೆ ಇದನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚು ಕಾರ್ಮಿಕರನ್ನು ಸೇರಿಸಿಕೊಂಡು ಪಿಪಿಇ ಕಿಟ್ಗಳನ್ನು ಪೂರೈಸುತ್ತಿದ್ದೇವೆ ಎಂದು ಹೇಳಿದರು.
ದೇಶ ವ್ಯಾಪಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಎಲ್ಲ ಕಂಪನಿಗಳನ್ನು ಮುಚ್ಚಲಾಗಿದೆ. ಅಗತ್ಯ ಸೇವೆಗಳಡಿ ಇಂತಹ ಕಂಪನಿಗಳ ಸೇವೆಗೆ ಅವಕಾಶ ಒದಗಿಸಲಾಗಿದೆ. ಇದನ್ನೇ ಬಳಸಿಕೊಂಡು ನಾವು ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಿ ವೈದ್ಯರಿಗೆ, ನರ್ಸ್ಗಳಿಗೆ ಕಿಟ್ಗಳನ್ನು ಒದಗಿಸುತ್ತಿದ್ದೇವೆ.
ನಮಗೆ ಹಣವೇ ಮುಖ್ಯವಲ್ಲ. ಎಷ್ಟು ಸಾಧ್ಯವೋ ಅಷ್ಟು ಕಿಟ್ಗಳನ್ನು ತಯಾರಿಸಿ ಬೇಡಿಕೆಗನುಗುಣವಾಗಿ ಒದಗಿಸಿಕೊಡುತ್ತೇವೆ ಎಂದು ಪ್ರವೀಣ್ ಹೇಳುತ್ತಾರೆ.