ಮೈಸೂರು: ನಂಜನಗೂಡಿನ ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧಿ ತಯಾರಿಕಾ ಕಾರ್ಖಾನೆಯಲ್ಲಿ 19 ಮಂದಿ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಹರಡಿರುವ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಔಷಧಿ ಕಾರ್ಖಾನೆಗೆ ಬಂದಿದ್ದ ಒಂದು ಕಂಟೈರ್ನಿಂದಲೇ ಕೊರೋನಾ ವೈರಸ್ ಬಂದಿದೆ ಎಂಬ ಸ್ಪೋಟಕ ಮಾಹಿತಿಯನ್ನು ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ.
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್ ತಿಂಗಳಲ್ಲಿ ಜುಬಿಲಿಯಂಟ್ ಔಷಧಿ ಕಾರ್ಖಾನೆಗೆ ಚೀನಾದಿಂದ ಒಂದು ಕಂಟೈನರ್ ಬಂದಿತ್ತು. ಅದನ್ನು ಹ್ಯಾಂಡಲ್ ಮಾಡಿದವರಿಗೆ ಕೊರೋನಾ ವೈರಸ್ ಬಂದಿರಬೇಕೆಂಬ ಅನುಮಾನವಿದೆ. ಇದನ್ನು ಜಿಲ್ಲಾಧಿಕಾರಿಗಳು ಕೂಡ ಹೇಳಿದ್ದಾರೆ.
ಚೀನಾದಿಂದ ಬಂದಿದ್ದ ಆ ಕಂಟೈನರ್ ಸ್ಯಾಂಪಲ್ ತೆಗೆದುಕೊಂಡು, ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬರಬೇಕಾಗಿದೆ. ಒಂದು ವೇಳೆ ವರದಿಯಲ್ಲಿ ಆ ಕಂಟೈನರ್ನಿಂದ ಕೊರೋನಾ ವೈರಸ್ ಕಾರ್ಮಿಕರಿಗೆ ಹರಡಿರುವುದು ಸಾಬೀತಾದರೆ, ಇದಕ್ಕೆ ಕಾರ್ಖಾನೆಯ ಆಡಳಿತ ಮಂಡಳಿಯವರ ಬೇಜವಾಬ್ದಾರಿತನವೇ ಕಾರಣವಾಗಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಏ.5ರ ಭಾನುವಾರ ರಾತ್ರಿ 9ಗಂಟೆಗೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರತಿಯೊಬ್ಬರು ತಮ್ಮ ಮನೆ ಮುಂದೆ ದೀಪಗಳನ್ನು ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದೀಪ ಹಚ್ಚುವುದರಿಂದ ಕೊರೋನಾ ವೈರಸ್ ನಾಶವಾಗುತ್ತದೆ ಎಂದರೆ, ದೀಪಗಳನ್ನು ಹಚ್ಚಲಿ, ನಮ್ಮದೇನು ಅಭ್ಯಂತರವಿಲ್ಲ ಎಂದರು.