ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿನ್ನೆ ತುಮಕೂರಿನ ಓರ್ವ ವ್ಯಕ್ತಿ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾ ವೈರಸ್ಗೆ ಬಲಿಯಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 834 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ.
ಭಾರತದಲ್ಲಿ ಶುಕ್ರವಾರ ಒಂದೇ ದಿನ 144 ಸೋಂಕಿತ ಪ್ರಕರಣಗಳು ದಾಖಲಾಗಿವೆ. ನಿನ್ನೆ ತುಮಕೂರಿನಲ್ಲಿ 65 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ಪತ್ತೆಯಾದ ಕೊರೋನಾ ಪ್ರಕರಣಗಳ ಪೈಕಿ ಒಂದೇ ದಿನ ದಾಖಲಾದ ಅತಿಹೆಚ್ಚು ಸೋಂಕಿತ ಪ್ರಕರಣ ಶುಕ್ರವಾರದ್ದಾಗಿದೆ. ನಿನ್ನೆ ಕರ್ನಾಟಕದಲ್ಲಿ 7 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಉಳಿದಂತೆ, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ರಾಜ್ಯಗಳ್ಲಲೂ ಹಲವು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ನಿನ್ನೆ ಬೆಂಗಳೂರೊಂದರಲ್ಲೇ 4 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 10 ತಿಂಗಳ ಮಗುವಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಉಳಿದಂತೆ ತುಮಕೂರಿನಲ್ಲಿ ಓರ್ವ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.