ಕೊರೋನಾ ಸೋಂಕಿಗೆ ಇಟಲಿಯಲ್ಲಿ ಒಂದೇ ದಿನ 600 ಸಾವು; ತುತ್ತು ಅನ್ನಕ್ಕೂ ಪರದಾಟ

ರೋಮ್​ : ಕೊರೋನಾ ವೈರಸ್ಗೆ ಇಟಲಿ ಅಕ್ಷರಶಃ ನಲುಗಿದೆ. ಇಡೀ ದೇಶದ ಜನತೆಗೆ ದುಃಸ್ವಪ್ನವಾಗಿ ಕಾಡುತ್ತಿರುವ ವೈರಸ್ಶುಕ್ರವಾರ ಒಂದೇ ದಿನ ಬರೋಬ್ಬರಿ 627 ಜನರನ್ನು ಬಲಿ ತೆಗೆದುಕೊಂಡಿದೆ. ಒಂದೇ ದಿನ ಇಷ್ಟು ಮಂದಿ ಅಸುನೀಗಿದ್ದು ಕೊರೋನಾ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಇಟಲಿಯಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡಿದ್ದು ಉತ್ತರ ಭಾಗದಲ್ಲಿರುವ ಲೊಂಬಾರ್ಡಿ ನಗರದಲ್ಲಿ. ಈ ನಗರದಲ್ಲಿ ನಿತ್ಯ ಕೊರೋನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಸಾವಿನ ಸಂಖ್ಯೆ ಕೂಡ ಮಿತಿ ಮೀರುತ್ತಿದೆ.

ಈ ಭಾಗದಲ್ಲಿ ಕೊರೋನಾ ಕಾಣಿಸಿಕೊಂಡಾಗ ಅಲ್ಲಿನ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ್ದು ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ. ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ.

ಲೊಂಬಾರ್ಡಿ ನಗರದಲ್ಲಿ ಕೊರೋನಾ ಭೀತಿ ಹೆಚ್ಚಿದ ಬೆನ್ನಲ್ಲೇ ಬಂದ್​ಗೆ ಕರೆ ನೀಡಲಾಗಿತ್ತು. ಆದರೆ, ಬಂದ್​ ಹೊರತಾಗಿಯೂ ಜನರು ಈ ಭಾಗದಲ್ಲಿ ಸುತ್ತಾಡಿಕೊಂಡಿದ್ದಾರೆ. ಈಗ ಹೇರಿರುವ ನಿರ್ಬಂಧ ಅಷ್ಟು ಕಠಿಣವಾಗಿಲ್ಲ ಎನ್ನುವುದು ಚೀನಾ ವಿಜ್ಞಾನಿಗಳ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಲಾಂಬಾರ್ಡಿಯಲ್ಲಿ ಈಗ ಸೇನೆ ನಿಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ.

ಸಾವಿನ ಸಂಖ್ಯೆ ಇಟಲಿಯಲ್ಲಿ 4 ಸಾವಿರದ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ 6000 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 47 ಸಾವಿರಕ್ಕೆ ಏರಿಕೆ ಆಗಿದೆ.

ಇನ್ನು, ದಿನ ನಿತ್ಯ ಬಳಕೆಯ ವಸ್ತುಗಳು ಸರಿಯಾಗಿ ಸಿಗದೆ ಮಧ್ಯಮ ವರ್ಗದ ಜನತೆ ಕಂಗಾಲಾಗಿದೆ. ಹೀಗಾಗಿ, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ