ಜೈಪುರ; ಮಾರಣಾಂತಿಕ ಕೊರೋನಾ ವೈರಸ್ಗೆ ಭಾರತದಲ್ಲಿ 5ನೇ ಬಲಿಯಾಗಿದೆ. ಸೋಂಕಿತರ ಸಂಖ್ಯೆ ದೇಶದಲ್ಲಿ 195ನ್ನು ದಾಟಿದ್ದು, ರಾಜಸ್ತಾನದ ಜೈಪುರದಲ್ಲಿ ಚಿಕಿತ್ಸೆಯಲ್ಲಿದ್ದ 69 ವರ್ಷದ ಇಟಾಲಿಯನ್ ಪ್ರಜೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರವಾಸಕ್ಕೆಂದು ಮೂರು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಇವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ಗೆ ಇದುವರೆಗೂ 10,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಭಾರತದಲ್ಲಿ ಈಗಾಗಲೇ ನಾಲ್ಕು ಜನ ಸಾವನ್ನಪ್ಪಿದ್ದು, ಇದು ಐದನೇ ಪ್ರಕರಣವಾಗಿದೆ.
ಅಮೆರಿಕದಲ್ಲಿ ಕೊರೋನಾ ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. 10 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಟಲಿಯಲ್ಲಿ ಬುಧವಾರ ಒಂದೇ ದಿನ 475ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಚೀನಾದ ಬಳಿಕ ಅತಿಹೆಚ್ಚು ಕೊರೋನಾ ಸೋಂಕಿತರ ದೇಶವಾಗಿ ಇಟಲಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯ ನೀಡಲು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 1 ಟ್ರಿಲಿಯನ್ ಯುರೋ ಪ್ರಿಂಟ್ ಮಾಡಿದೆ.
ಭಾರತದ ರಾಜ್ಯಗಳ ಬಹುತೇಕ ನಗರಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಭಾರತದಲ್ಲಿ ಸೋಂಕಿತರ ಸಂಖ್ಯೆ 195 ಕ್ಕೆ ಏರಿಕೆಯಾಗಿದೆ. ಕೊರೋನಾ ಶಂಕಿತರನ್ನು ಆಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲು ಸಾಧ್ಯವಾಗದ ಕಾರಣ ಅವರನ್ನು ಮನೆಯಲ್ಲೇ ಇರಿಸಿ, 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಅಲ್ಲದೆ, ಮನೆಯಲ್ಲೇ ಸ್ವನಿರ್ಬಂಧಕ್ಕೆ ಸರ್ಕಾರ ಆದೇಶಿಸಿದೆ.ಇರಾನ್ನಲ್ಲಿ ಗುರುವಾರ ಒಂದೇ ದಿನ 149 ಜನ ಕೊರೋನಾಗೆ ಬಲಿಯಾಗಿದ್ದಾರೆ. ಇದುವರೆಗೂ ಇರಾನ್ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 1284ಕ್ಕೆ ಏರಿಕೆಯಾಗಿದೆ. ಇಟಲಿ, ಸ್ಪೇನ್, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿದ್ದು ಆರ್ಥಿಕತೆಯ ಮೇಲೂ ದೊಡ್ಡ ಪರಿಣಾಮ ಬೀರಿದೆ.