ಹೊಸದಿಲ್ಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು, ಗೋವಾ, ಮಹಾರಾಷ್ಟ್ರ , ಕರ್ನಾಟಕ ಮೂರು ರಾಜ್ಯಗಳಿಗೂ ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರ ಹೋರಾಟಕ್ಕೆ ಕೊನೆಗೂ ಮನ್ನಣೆ ಸಿಕ್ಕಿದಂತಾಗಿದೆ.
ಕಳೆದ ವರ್ಷವೇ ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿದ್ದರೂ ಈ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರಲಿಲ್ಲ. ಇದರಿಂದಾಗಿ ಕರ್ನಾಟಕ ಪಾಲಿನ ನೀರಿನ ಬಳಕೆಯಲ್ಲಿ ತೊಡಗುಂಟಾಗಿತ್ತು.
ವರ್ಷವೇ ಕಳೆದರೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತಿರಲಿಲ್ಲ. ಈ ಬಗ್ಗೆ ಹಲವಾರು ಪ್ರತಿಭಟನೆಗಳು ಕೂಡ ನಡೆದಿದ್ದವು. ಮಹದಾಯಿ ನ್ಯಾಯಾಧಿಕರಣದ ಆದೇಶ ಜಾರಿಗೆ ತರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ರೈತಸೇನಾ ಅಧ್ಯಕ್ಷ ವೀರೇಶ್ ಸೊಬರದಮಠ ಆಗ್ರಹಿಸಿದ್ದರು.
ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಮೂರು ರಾಜ್ಯಗಳು ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದ್ದು, ದಾಖಲೆ ಸಲ್ಲಿಕೆಯಾದ ಬಳಿಕ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಕೂಡ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಗೋವಾ, ಮಹಾರಾಷ್ಟ್ರ ಸಹಮತ ಸೂಚಿಸಿದೆ.
ಇನ್ನು ಅಧಿಸೂಚನೆಗೆ ಸುಪ್ರೀಂ ಅವಕಾಶ ನೀಡಿದ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿನ ಸದಸ್ಯರಿಗೆ ಸಿಎಂ ತಿಳಿಸಿದರು. ಸುಪ್ರೀಂ ಆದೇಶ ಸಂತಸ ನೀಡಿದೆ. ನಮ್ಮ ಪಾಲಿನ 14.2ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಸುಪ್ರಿಂ ಕೋರ್ಟ್ ಆದೇಶ ನೀಡಿದೆ ಎಂದು ತಿಳಿಸಿದರು.